ನವದೆಹಲಿ: ಭಾರತದಲ್ಲಿ ಕೊರೊನಾರ್ಭಟ ಮಿತಿ ಮೀರಿದ್ದು, ಆಮ್ಲಜನಕ ಕೊರೆತೆಯಿಂದ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಇಲ್ಲಿನ ಸ್ಥಿತಿ ಕಂಡು ದೇಶಿ, ವಿದೇಶಿ ಕ್ರಿಕೆಟಿಗರು ಮರುಕ ವ್ಯಕ್ತಪಡಿಸಿ ಆಮ್ಲಜನಕ ಕೊರತೆಯನ್ನು ನೀಗಿಸಲು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ.
ಐಪಿಎಲ್ನಲ್ಲಿ ಕೆಕೆಆರ್ ಪರ ಆಡುವ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಇತ್ತೀಚೆಗೆ ಭಾರತದ ಕೊರೊನಾ ರೋಗಿಗಳಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಲು 50,000 ಡಾಲರ್(37 ಲಕ್ಷ ರೂ.) ಹಣವನ್ನು ಪಿಎಂ ಕೇರ್ಸ್ ಫಂಡ್ಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದರು.
ಆದರೆ ಇದೀಗ ಅವರು ತಮ್ಮ ಹಣವನ್ನು ಪಿಎಂ ಕೇರ್ಸ್ ಫಂಡ್ ಬದಲಿಗೆ ಯುನಿಸೆಫ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್‌ಗೆ ನೀಡುವ ನಿರ್ಧಾರ ಮಾಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಭಾರತಕ್ಕೆ ಈ ಆಯ್ಕೆಯ ಮೂಲಕ ದೇಣಿಗೆ ನೀಡಿದ ನಂತರ ಕಮ್ಮಿನ್ಸ್ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.