ಗಬ್ಬಾ (ಬ್ರಿಸ್ಬೇನ್): ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ದಾಳಿಗೆ ತತ್ತರಿಸಿದ ಆಂಗ್ಲನ್ನರು 147 ರನ್‌ಗಳಿಗೆ ಆಲೌಟ್ ಆಗಿದ್ದಾರೆ. ಇದರ ಜೊತೆಗೆ ನಾಯಕನಾಗಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಪ್ಯಾಟ್ ಕಮಿನ್ಸ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.
ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿಕೊಂಡಿರುವ ಕಾರಣ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಪೇನ್ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ತಂಡದ ವೇಗಿ ಪ್ಯಾಟ್ ಕಮಿನ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದು, ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಕಾಂಗರೂ ಪಡೆ ಮುನ್ನಡೆಸುತ್ತಿದ್ದು, ಹೊಸದೊಂದು ದಾಖಲೆ ಬರೆದಿದ್ದಾರೆ.
ಕ್ಯಾಪ್ಟನ್ ಆಗಿ ಕಮಿನ್ಸ್ ಸಾಧನೆ
ಈ ಹಿಂದೆ 1982ರಲ್ಲಿ ಇಂಗ್ಲೆಂಡ್ ವೇಗಿ ಬಾಬ್ ವಿಲ್ಲಿಸ್ ಆ್ಯಶಸ್ ಟೆಸ್ಟ್ನಲ್ಲಿ ಕ್ಯಾಪ್ಟನ್ ಆಗಿ ಐದು ವಿಕೆಟ್ ಪಡೆದುಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಮೊದಲ ನಾಯಕನಾಗಿದ್ದರು. ಇದಾದ ಬಳಿಕ ಇಂದಿನ ಪಂದ್ಯದಲ್ಲಿ ಕಮಿನ್ಸ್ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದುಕೊಂಡು ಈ ಸಾಧನೆ ಮಾಡಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ಪರ ಆ್ಯಶಸ್ ಸರಣಿಯಲ್ಲಿ ಈ ರೆಕಾರ್ಡ್ ಬರೆದ ಮೊದಲ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
ಕಮಿನ್ಸ್ ಮಾರಕ ಬೌಲಿಂಗ್ನಿಂದ ಎದುರಾಳಿ ಇಂಗ್ಲೆಂಡ್ ತಂಡದ ಹಸೀಬ್ ಹಮೀದ್ (25), ಬೆನ್ ಸ್ಟೋಕ್ಸ್ (5) ಕ್ರಿಸ್ ವೋಕ್ಸ್ (21), ಓಲ್ಲೀ ರಾಬಿನ್ಸನ್ (0) ಮತ್ತು ಮಾರ್ಕ್ ವುಡ್ (8) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಇದನ್ನೂ ಓದಿರಿ:ಆಸ್ಟ್ರೇಲಿಯಾ-ಇಂಗ್ಲೆಂಡ್ ಗಬ್ಬಾ ಟೆಸ್ಟ್: 147 ರನ್‌ಗಳಿಗೆ ರೂಟ್ ಪಡೆ ಸರ್ವಪತನ
ಕ್ಯಾಪ್ಟನ್ ಆದ ಮೊದಲ ಟೆಸ್ಟ್ ಪಂದ್ಯದಲ್ಲೇ ಐದು ವಿಕೆಟ್ ಸಾಧನೆ ಮಾಡಿದ ಆಟಗಾರರ ಪೈಕಿ, ಕಮಿನ್ಸ್ 2019ರ ಬಳಿಕ ಮೊದಲ ಆಟಗಾರರಾಗಿ ಹೊರಹೊಮ್ಮಿದ್ದಾರೆ. 2019ರಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಈ ಸಾಧನೆ ಮಾಡಿದ್ದರು. ಇವರ ಸಾಧನೆಗೆ ಟೀಂ ಇಂಡಿಯಾದ ಆರ್.ಅಶ್ವಿನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.