ಕಾಬೂಲ್(ಅಫ್ಘಾನಿಸ್ತಾನ):ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಗಳನ್ನು ಆಡಲು ಅನುಮತಿ ನೀಡುವುದಿಲ್ಲ ಎಂದು ತಾಲಿಬಾನ್ ಈಗಾಗಲೇ ಕಟ್ಟಪ್ಪಣೆ ಹೊರಡಿಸಿದೆ. ಈ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ನಿರ್ಧಾರ ಕೈಗೊಂಡಿದೆ.
ಒಂದು ವೇಳೆ ತಾಲಿಬಾನ್ ಮಹಿಳಾ ಕ್ರಿಕೆಟ್ ಬ್ಯಾನ್ ಮಾಡಿದ್ರೆ, ನಾವು ಅಫ್ಘಾನಿಸ್ತಾನ ಪುರುಷ ತಂಡದೊಂದಿಗೆ ನಡೆಯಬೇಕಿರುವ ಏಕೈಕ ಟೆಸ್ಟ್ ಪಂದ್ಯದಲ್ಲೂ ಭಾಗಿಯಾಗುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.
ಈ ಕುರಿತಾಗಿ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಜಾಗತಿಕವಾಗಿ ಮಹಿಳೆಯರು ಎಲ್ಲ ವಿಭಾಗಗಳಲ್ಲೂ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಕ್ರಿಕೆಟ್ ಸೇರಿದಂತೆ ಎಲ್ಲ ವಿಭಾಗದ ಕ್ರೀಡೆಗಳಲ್ಲಿ ಅವರನ್ನು ಬೆಂಬಲಿಸುವುದು ಆಸ್ಟ್ರೇಲಿಯಾದ ಆದ್ಯ ಕರ್ತವ್ಯ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಮಹಿಳಾ ಕ್ರಿಕೆಟ್ಗೆ ನಿಷೇಧ ಹೇರಿದರೆ, ನಾವು ಅಫ್ಘಾನಿಸ್ತಾನ ಪುರುಷ ತಂಡದೊಂದಿಗೆ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ. ಈ ಟೆಸ್ಟ್ ಪಂದ್ಯ ರದ್ದುಗೊಳಿಸಬೇಕಾಗುತ್ತದೆ ಎಂದು ತಿಳಿಸಿದೆ.