ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ): ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ ಸರ್ಫರಾಜ್ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ಆಟಗಾರ ಸರ್ಫರಾಜ್ ಕಣಿವೆ ರಾಜ್ಯವಾದ ಜಮ್ಮು ಕಾಶ್ಮೀರದ ಯುವತಿಯನ್ನು ವರಿಸಿದ್ದಾರೆ. ತಮ್ಮ ವಿವಾಹದ ಬಗ್ಗೆ ಸರ್ಫರಾಜ್ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಆಡುವ ಸರ್ಫರಾಜ್ ಕಪ್ಪು ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟ್ವಿಟರ್ನಲ್ಲಿ ವಿವಾಹ ಸಂದರ್ಭದ ಕೆಲ ವಿಡಿಯೋಗಳು ಹರಿದಾಡುತ್ತಿವೆ.
ಕ್ರಿಕೆಟರ್ಗಳಾದ ಸೂರ್ಯಕುಮಾರ್ ಯಾದವ್, ಉಮ್ರಾನ್ ಮಲಿಕ್, ರುತುರಾಜ್ ಗಾಯಕ್ವಾಡ್, ಮಂದೀಪ್ ಸಿಂಗ್, ಕಲೀಲ್ ಅಹಮದ್, ತಿಲಕ್ ವರ್ಮಾ ಮತ್ತು ಅಕ್ಷರ್ ಪಟೇಲ್ ಇನ್ಸ್ಟಾಗ್ರಾಮ್ನಲ್ಲಿ ಕಮೆಂಟ್ ಮಾಡಿ ಶುಭಹಾರೈಸಿದ್ದಾರೆ.
ಸರ್ಫರಾಜ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಉತ್ತಮ ಸ್ಕೋರ್ ಮಾಡಿದ ಸಾಧನೆಗೈದಿದ್ದಾರೆ. 37 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 79.65ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದು, 13 ಶತಕ ಸೇರಿಸಿ 3505 ರನ್ ಗಳಿಸಿದ್ದಾರೆ. ದೇಶಿಯ ಪಂದ್ಯಗಳಲ್ಲಿ ಅಜೇಯ 301 ಅತ್ಯುತ್ತಮ ಸ್ಕೋರ್ ಆಗಿದೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು 26 ಪಂದ್ಯಗಳಲ್ಲಿ 39.08 ಸರಾಸರಿಯೊಂದಿಗೆ ಎರಡು ಶತಕ ಸಹಿತ 469 ರನ್ ಗಳಿಸಿದ್ದಾರೆ.
2022-23 ರ ರಣಜಿ ಟ್ರೋಫಿ ಋತುವಿನಲ್ಲಿ, ಸರ್ಫರಾಜ್ 92.66 ರ ಸರಾಸರಿಯೊಂದಿಗೆ ಬ್ಯಾಟ್ ಮಾಡಿದ ಅವರು 6 ಪಂದ್ಯದಲ್ಲಿ ಮೂರು ಶತಕಗಳಿಸಿ 556 ರನ್ ಗಳಿಸಿದ್ದಾರೆ. ಮುಂಬೈ ಬ್ಯಾಟರ್ 2022 ರ ರಣಜಿ ಋತುವಿನಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದರು. ಆರು ಪಂದ್ಯದಲ್ಲಿ 122.75 ಸರಾಸರಿಯಲ್ಲಿ 982 ರನ್ ಗಳಿಸಿದ್ದರು. 2019-2020ರ ರಣಜಿ ಟ್ರೋಫಿಯಲ್ಲಿ ಟಾಪ್ ಐದು ಸ್ಕೋರ್ ಮಾಡಿದವರ ಪಟ್ಟಿಯಲ್ಲಿದ್ದರು. ಅವರು ಆರು ಪಂದ್ಯಗಳಲ್ಲಿ 154.66 ಸರಾಸರಿಯೊಂದಿಗೆ 928 ರನ್ ಗಳಿಸಿದರು.
ಆದರೆ 16ನೇ ಆವೃತ್ತಿಯ ಐಪಿಎಲ್ನಲ್ಲಿ ರನ್ ಗಳಿಸುವಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ಪ್ರಥಮ ದರ್ಜೆಯಲ್ಲಿ ಉತ್ತಮ ಫಾರ್ಮ್ನ್ನು ಮಾತ್ರ ಕಳೆದ ಮೂರು ವರ್ಷಗಳಿಂದ ಹೊಂದಿದ್ದರು. ಆದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗುವಲ್ಲಿ ವಿಫಲತೆ ಅನುಭವಿಸುತ್ತಿದ್ದಾರೆ. ದೇಶಿ ಕ್ರಿಕೆಟ್ನ ಟೆಸ್ಟ್ ಮಾದರಿಯಲ್ಲಿ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದರೂ ವೆಸ್ಟ್ ಇಂಡೀಸ್ ಪ್ರವಾಸಕ್ಕೆ, ಇಂಗ್ಲೆಂಡ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಆಯ್ಕೆ ಆಗಿಲ್ಲ. ಅವರು ಫಿಟ್ನೆಸ್ ಕಾಯ್ದುಕೊಳ್ಳದಿರುವುದು ಮತ್ತು ಅಗ್ರೆಸಿವ್ ನಡವಳಿಕೆಯೂ ಅವರ ರಾಷ್ಟ್ರೀಯ ತಂಡದ ಆಯ್ಕೆಗೆ ತಡೆಯಾಗುತ್ತಿದೆ.
ಇದನ್ನೂ ಓದಿ:Lionel Messi: ಮೆಸ್ಸಿಯ ರೋಮಾಂಚನಕಾರಿ ಫ್ರೀ ಕಿಕ್.. ಡಲ್ಲಾಸ್ ವಿರುದ್ಧ ಮಿಯಾಮಿಗೆ ಗೆಲುವು