ನವದೆಹಲಿ: "ಐಸಿಸಿ ಪ್ಲೇಯರ್ ಆಫ್ ದಿ ಮಂತ್" ಡಿಸೆಂಬರ್ 2023ರ ಪ್ರಶಸ್ತಿ ವಿಜೇತರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಘೋಷಿಣೆ ಮಾಡಿದೆ. ಮಹಿಳಾ ವಿಭಾಗದಲ್ಲಿ ಭಾರತ ತಂಡದ ಆಗ್ರಾ ಮೂಲದ ಅಲ್ರೌಂಡರ್ ದೀಪ್ತಿ ಶರ್ಮ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ತಿಂಗಳು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ದೀಪ್ತಿ 55 ಸರಾಸರಿಯಲ್ಲಿ 165 ರನ್ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದರು. ಬೌಲಿಂಗ್ನಲ್ಲೂ ಮಿಂಚಿದ್ದ ದೀಪ್ತಿ 10.81ರ ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದರು. ಈ ಎರಡೂ ಟೆಸ್ಟ್‌ಗಳಲ್ಲಿ ಭಾರತ ಗೆಲುವಿನ ಪತಾಕೆ ಹಾರಿಸಿದೆ.
ಅಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ತೋರಿದ್ದರು. ಎರಡನೇ ODIನಲ್ಲಿ ಐದು ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದರು. ಈ ಎಲ್ಲಾ ಸಾಧನೆಯಿಂದಾಗಿ ಐಸಿಸಿ ಮಾಸಿಕ ಕ್ರಿಕೆಟರ್ ಪ್ರಶಸ್ತಿ ಪಡೆದಿದ್ದಾರೆ. ಇದಕ್ಕೂ ಮೊದಲು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಕ್ಟೋಬರ್ 2022ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದರು. ಇದೀಗ ದೀಪ್ತಿ ಪ್ರಶಸ್ತಿ ಪಡೆದ ಎರಡನೇ ಭಾರತೀಯ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ಆಸ್ಟ್ರೇಲಿಯಾದ ನಾಯಕ ಮತ್ತು ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ICC ತಿಂಗಳಿನ ಆಟಗಾರರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ತೈಜುಲ್ ಇಸ್ಲಾಂ ಮತ್ತು ಗ್ಲೆನ್ ಫಿಲಿಪ್ಸ್ ಅವರನ್ನು ಹಿಂದಿಕ್ಕಿ ಕಮಿನ್ಸ್ ಪ್ರಶಸ್ತಿ ಪಡೆದಿದ್ದಾರೆ. ತವರಿನಲ್ಲಿ ನಡೆದ ಪಾಕಿಸ್ತಾನ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಪೈಕಿ ಮೊದಲೆರಡು ಪಂದ್ಯಗಳಲ್ಲಿ ಕಮ್ಮಿನ್ಸ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಮೂರು ಮತ್ತು ಮೆಲ್ಬೋರ್ನ್‌ನಲ್ಲಿ 10 ವಿಕೆಟ್ ಪಡೆದು ಮಿಂಚಿದ್ದರು. ಕಮ್ಮಿನ್ಸ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಐದು ವಿಕೆಟ್‌ಗಳನ್ನು ಉರುಳಿಸಿದ್ದರು.