ಕೋಲ್ಕತ್ತಾ (ಪಶ್ಚಿಮ ಬಂಗಾಳ):ಭಾರತ ತಂಡದ ಮೊದಲ ವಿಶ್ವಕಪ್ ಪಂದ್ಯಕ್ಕೆ ಸಣ್ಣ ಆತಂಕ ಎದುರಾಗಿದೆ. ಈ ವರ್ಷ ಗೋಲ್ಡನ್ ಫಾರ್ಮ್ನಲ್ಲಿರುವ ಶುಭ್‌ಮನ್ ಗಿಲ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅಕ್ಟೋಬರ್ 8 ರಂದು ನಡೆಯುವ ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಗಿಲ್ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
'ಒಬ್ಬರ ದುರಾದೃಷ್ಟ ಇನ್ನೊಬ್ಬರಿಗೆ ಅದೃಷ್ಟವಾಗಿ ಪರಿಣಮಿಸಬಹುದು' ಎಂಬ ಗಾದೆಯಂತೆ ಗಿಲ್ ದುರಾದೃಷ್ಟ ಕಿಶನ್‌ಗೆ ಅದೃಷ್ಟವಾಗುವ ಸಾಧ್ಯತೆ ಇದೆ. ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್‌ಗೆ ಆಡುವ 11ರ ಬಳಗದಲ್ಲಿ ಅವಕಾಶ ಹೆಚ್ಚೂ ಕಡಿಮೆ ಅನುಮಾನ ಎಂದೇ ಹೇಳಬಹುದು. ಏಕೆಂದರೆ ಕಿಶನ್ ಆಯ್ಕೆ ಎರಡನೇ ಕೀಪರ್ ಸ್ಥಾನವಾಗಿದೆ. ರಾಹುಲ್ ತಂಡದ ಪ್ರಥಮಾದ್ಯತೆಯ ವಿಕೆಟ್ ಕೀಪರ್ ಆಗಿದ್ದಾರೆ. ಹೀಗಾಗಿ ಇವರ ಅನುಪಸ್ಥಿತಿಯಲ್ಲಷ್ಟೇ ಕಿಶನ್ ತಂಡ ಸೇರಿಕೊಳ್ಳಲಿದ್ದಾರೆ.
ಶುಭ್‌ಮನ್ ಗಿಲ್ ಆರೋಗ್ಯದ ಬಗ್ಗೆ ತಿಳಿದು ಬಂದಿರುವ ಪ್ರಾಥಮಿಕ ಮಾಹಿತಿಯಂತೆ, ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಚೇತರಿಸಿಕೊಂಡರೂ ಅವರನ್ನು ತಂಡದಲ್ಲಿ ಆಡಿಸುತ್ತಾರಾ ಎಂಬುದು ಪ್ರಶ್ನೆ. ರೋಹಿತ್ ಜೊತೆಗೆ ಆಸಿಸ್ ವಿರುದ್ಧ ಆರಂಭಿಕ ಯಾರು ಎಂಬ ಪ್ರಶ್ನೆಗೆ ಕಿಶನ್ ಉತ್ತರವಾಗುತ್ತಾರೆ.
ವೈದ್ಯಕೀಯ ಸಲಹೆಯಂತೆ ಕ್ರಮ:ಕೋಚ್ ರಾಹುಲ್ ದ್ರಾವಿಡ್, ಗಿಲ್ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಹೇಳಿದ್ದಾರೆ. "ಗಿಲ್ ಖಂಡಿತವಾಗಿಯೂ ಇಂದು ಉತ್ತಮವಾಗಿದ್ದಾರೆ. ವೈದ್ಯಕೀಯ ತಂಡ ದಿನನಿತ್ಯದ ಆಧಾರದ ಮೇಲೆ ಮೇಲ್ವಿಚಾರಣೆ ನಡೆಸುತ್ತಿದೆ. ನಮಗೆ 36 ಗಂಟೆಗಳಿವೆ, ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ಅವರು ಇಂದು ಖಂಡಿತವಾಗಿಯೂ ಚೇತರಿಸಿಕೊಳ್ಳುತ್ತಾರೆ. ವೈದ್ಯಕೀಯ ತಂಡ ಅವರಿಗೆ ಆಡದಂತೆ ಹೇಳಿಲ್ಲ. ನಾವು ದಿನದಿಂದ ದಿನಕ್ಕೆ ಅವರನ್ನು ಮೇಲ್ವಿಚಾರಣೆ ಮಾಡುತ್ತಿರುತ್ತೇವೆ. ನಾಳೆ ಅವರ ಆರೋಗ್ಯ ಚೇತರಿಕೆ ನೋಡಿದ ನಂತರ ಪರ್ಯಾಯ ಆಲೋಚನೆ ಮಾಡುತ್ತೇವೆ" ಎಂದು ದ್ರಾವಿಡ್ ತಿಳಿಸಿದ್ದಾರೆ.
24 ವರ್ಷದ ಯುವ ಬ್ಯಾಟರ್ ಗಿಲ್ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಬಾರಿಸಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಶತಕ ದಾಖಲಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಅತ್ತ ಕಿಶನ್ ಸಹ ತಮ್ಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಡಿದು ಏಷ್ಯಾಕಪ್ವರೆಗೆ ರನ್ ಕಲೆಹಾಕುತ್ತಲೇ ಬಂದಿದ್ದಾರೆ. ಹೀಗಾಗಿ ಆರಂಭಿಕರಾಗಿ ಯಾರೇ ಕಣಕ್ಕಿಳಿದರೂ ರನ್ ಹೊಳೆ ಹರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ:World Cup 2023: ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಪಾಕ್; ನೆದರ್ಲೆಂಡ್ಸ್ ಗೆಲುವಿಗೆ 287 ರನ್ ಗುರಿ