ಹೈದರಾಬಾದ್: ಏಕದಿನ ವಿಶ್ವಕಪ್ಗೆ ಭಾರತ ಪ್ರವಾಸಕ್ಕೆ ವೀಸಾ ಸಿಕ್ಕಿಲ್ಲ ಎಂದು ಆರೋಪಿಸಿದ್ದ ಪಾಕಿಸ್ತಾನಕ್ಕೆ ಅಭ್ಯಾಸ ಪಂದ್ಯಕ್ಕೆ ಎರಡು ದಿನ ಮುಂಚಿತವಾಗಿ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಭಾರತ ಸರ್ಕಾರ ಪಾಕಿಸ್ತಾನ ತಂಡಕ್ಕೆ ಸೂಕ್ತ ಸಮಯಕ್ಕೆ ವೀಸಾ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ವಹಣಾ ಕಮಿಟಿ ಮಾತ್ರ ಎರಡು ದಿನಗಳ ಹಿಂದೆ ವೀಸಾ ಸಮಸ್ಯೆ ಆಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಐಸಿಸಿಗೂ ಪತ್ರ ಬರೆದಿದ್ದರು. ಆದರೆ ಈಗ ಎಲ್ಲದಕ್ಕೂ ಪರಿಹಾರ ಸಿಕ್ಕಿದ್ದು ಇಂದು ತಂಡ ಭಾರತಕ್ಕೆ ಬಂದಿಳಿದಿದೆ.
ಶುಕ್ರವಾರ ಉಪ್ಪಲ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಅಭ್ಯಾಸ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ಧ ವಿಶ್ವಕಪ್ನ ತನ್ನ ಮೊದಲ ಪಂದ್ಯವನ್ನು ಆಡಲಿದೆ. 1992 ರಲ್ಲಿ ನಾಯಕ ಇಮ್ರಾನ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಮೆನ್ ಇನ್ ಗ್ರೀನ್ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು 2016ರಲ್ಲಿ ಭಾರತಕ್ಕೆ ಬಂದಿತ್ತು. ಅದಾದ ನಂತರ ರಾಜತಾಂತ್ರಿಕ ಕಾರಣಗಳಿಂದ ಉಭಯ ತಂಡಗಳು ದೇಶಗಳಿಗೆ ಹೋಗಿ ಆಡಿರಲಿಲ್ಲ. ಈ ಬಾರಿಯ ಏಷ್ಯಾಕಪ್ ಪಾಕಿಸ್ತಾನ ಆಯೋಜಿಸ ಬೇಕಾಗಿದ್ದರೂ, ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಹೈಬ್ರಿಡ್ ಮಾದರಿಯನ್ನು ಪಂದ್ಯಗಳನ್ನು ಆಡಿಸಲಾಯಿತು.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್ ಮತ್ತು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಆಡುತ್ತವೆ ಮತ್ತು ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಿಲ್ಲ. ಪಾಕಿಸ್ತಾನಿ ಆಟಗಾರರು ತಮ್ಮ ಅಭ್ಯಾಸ ಪಂದ್ಯಕ್ಕೆ ಮುಂಚಿತವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಕೇವಲ ಒಂದು ದಿನದ ಸಮಯವನ್ನು ಮಾತ್ರ ಪಡೆಯುತ್ತಾರೆ. ಹಬ್ಬದ ದಿನಗಳ ನಡುವೆ ಪಾಕಿಸ್ತಾನ ತಂಡದ ಅಭ್ಯಾಸ ಪಂದ್ಯ ನಡೆಯುತ್ತಿರುವ ಕಾರಣ ಈ ಮ್ಯಾಚ್ಗೆ ಭದ್ರತಾ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ಇಲ್ಲಾ ಎಂದು ಬಿಸಿಸಿಐ ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಿದೆ. ಮೊಹಮ್ಮದ್ ನವಾಜ್ ಮತ್ತು ಸಲ್ಮಾನ್ ಅಲಿ ಅಘಾ ಮಾತ್ರ ಭಾರತಕ್ಕೆ ಕ್ರಿಕೆಟ್‌ಗಾಗಿ ಭೇಟಿ ನೀಡಿದ್ದಾರೆ. ಗಾಯದ ಕಾರಣ ಬಾಬರ್ 2016 ರಲ್ಲಿ ಭಾರತದಲ್ಲಿ ಟಿ 20 ವಿಶ್ವಕಪ್ ಆಡಲು ಸಾಧ್ಯವಾಗಲಿಲ್ಲ.