ಚೆನ್ನೈ (ತಮಿಳುನಾಡು) :ಏಕದಿನ ವಿಶ್ವಕಪ್ನ ಬಿಗ್ ಮ್ಯಾಚ್ ಆಸ್ಪ್ರೇಲಿಯಾ ಮತ್ತು ಭಾರತ ಮಧ್ಯೆ ಇಲ್ಲಿನ ಚೆಪಾಕ್ ಎಂದೇ ಹೆಸರಾಗಿರುವ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ನಡುವಿನ ಉದ್ಘಾಟನಾ ಪಂದ್ಯ ಕಡಿಮೆ ಜನರ ಮಧ್ಯೆ ನಡೆದಿದ್ದು, ಈ ಪಂದ್ಯಕ್ಕೆ ಹೆಚ್ಚಿನ ಅಭಿಮಾನಿಗಳು ಹರಿದುಬರುವ ಸಾಧ್ಯತೆ ಇದೆ. 50 ಸಾವಿರ ಜನರ ಸಾಮರ್ಥ್ಯ ಕ್ರೀಡಾಂಗಣದ ಎಲ್ಲ ಟಿಕೆಟ್ಗಳು ಬಿಕರಿಯಾಗಿವೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಸೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಕಪ್ಪು, ಕಂದು ಬಣ್ಣದ ಪಿಚ್:'ಚೆಪಾಕ್' ಪಿಚ್ ಕಂದು ಮತ್ತು ಕಪ್ಪು ಮಣ್ಣಿನ ಮಿಶ್ರಣದಿಂದ ಕೂಡಿದೆ. ಭಾನುವಾರ ಪಂದ್ಯ ನಡೆಯಲಿರುವ ಕಾರಣ ಮೈದಾನವನ್ನು ಜತನದಿಂದ ಮುಚ್ಚಿಡಲಾಗಿದೆ. 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಕಾರಣ ಪಿಚ್ ಬಿರುಕು ಬಿಡದಿರಲಿ ಎಂದು ಹೊದಿಕೆ ಹಾಕಲಾಗಿದೆ. ಶುಕ್ರವಾರ ಸಂಜೆ ಅಭ್ಯಾಸದ ವೇಳೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಪಿಚ್ ಅನ್ನು ಪರಿಶೀಲಿಸಿದರು.
ಮೈದಾನದ ಮೇಲಿನ ಹುಲ್ಲನ್ನು ಕತ್ತರಿಸಲಾಗಿದೆ. ಕಂದು, ಕಪ್ಪು ಮಣ್ಣಿನ ಪಿಚ್ ಮೊದಲಾರ್ಧದಲ್ಲಿ ಬ್ಯಾಟರ್ಗಳಿಗೆ ನೆರವಾಗಲಿದೆ. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರಕಾರ, ಸಂಜೆ ವೇಳೆಗೆ ಪಿಚ್ ತಿರುವು ಪಡೆಯಲಿದೆ. ಇಲ್ಲಿ 270-280 ಸ್ಕೋರ್ ಸ್ಪರ್ಧಾತ್ಮಕವಾಗಿರುತ್ತದೆ ಎಂದಿದ್ದಾರೆ. ಈ ಮೈದಾನ ಸ್ಪಿನ್ನರ್ಗಳ ಸ್ವರ್ಗವಾಗಿದೆ. ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 48 ವಿಕೆಟ್‌ಗಳನ್ನು ಕಬಳಿಸಿ, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇನ್ನೊಬ್ಬ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ 42 ವಿಕೆಟ್ ಕಿತ್ತಿದ್ದಾರೆ.