ಅಹಮದಾಬಾದ್ (ಗುಜರಾತ್): ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಬಿಗ್ ಮ್ಯಾಚ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಬದ್ಧ ಸಾಂಪ್ರದಾಯಿಕ ಎದುರಾಳಿಗಳಾದ ಉಭಯ ತಂಡಗಳು ಮೈದಾನದಲ್ಲಿ ಸೆಣಸಾಟಕ್ಕೆ ಸಜ್ಜಾಗಿವೆ. ಇಡೀ ಕ್ರಿಕೆಟ್ ಜಗತ್ತಿನ ಚಿತ್ತ ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದತ್ತ ನೆಟ್ಟಿದೆ. ಈಗಾಗಲೇ ಈ ಹೈವೋಲ್ಟೇಜ್ ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳ ದಂಡು ಮೈದಾನದತ್ತ ಹರಿದು ಬರುತ್ತಿದ್ದು, ವ್ಯಾಪಾರ-ವಹಿವಾಟು ಜೋರಾಗಿದೆ.
ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಇಂಡೋ-ಪಾಕ್ ತಂಡಗಳು ಮುಖಾಮುಖಿಯಾಗಲು ಅಣಿಯಾಗಿವೆ. ಕ್ರೀಡಾಂಗಣಕ್ಕೆ ಸಾಗುವ ಹಾದಿಯಲ್ಲಿ ವ್ಯಾಪಾರ ಚುರುಕು ಪಡೆದಿದೆ. ಕ್ರಿಕೆಟ್ ಪ್ರೇಮಿಗಳು, ಅಭಿಮಾನಿಗಳು ಹೋಗುವ ಪಾದಚಾರಿ ಮಾರ್ಗಗಳಲ್ಲಿ ಹಲವು ಬಗೆಯ ವಸ್ತುಗಳ ಮಾರಾಟಕ್ಕೆ ವ್ಯಾಪಾರಸ್ಥರು ಹಾಗೂ ಮಾರಾಟಗಾರರು ನೆರೆದಿದ್ದಾರೆ. ಈ ಪಂದ್ಯ ಎಷ್ಟು ಮಹತ್ವ ಪಡೆದಿದೆ ಎಂದರೆ ಉದ್ಯಮಿ ಗೌತಮ್ ಅದಾನಿ ಕೂಡ 'ಅದಾನಿ' ಮುದ್ರೆಯ 25 ಸಾವಿರ ಬಿಳಿ ಕ್ಯಾಪ್ಗಳನ್ನು ಉಚಿತವಾಗಿ ವಿತರಿಸಲು ತಮ್ಮ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
''ಇಲ್ಲಿಯವರೆಗೆ (ಬೆಳಗ್ಗೆ 9 ಸುಮಾರು) ನಾವು ಸರಿಸುಮಾರು 20 ಸಾವಿರ ಕ್ಯಾಪ್ಗಳನ್ನು ವಿತರಿಸಿದ್ದೇವೆ. ಇನ್ನೂ ಸ್ವಲ್ಪ ಕ್ಯಾಪ್‌ಗಳು ಮಾತ್ರ ಉಳಿದಿವೆ. ಇದು ನಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಆಗಿದೆ. ನಮ್ಮ ಕೊಡುಗೆ ನೀತಿಯಡಿ ನಾವು ಸ್ಕೂಲ್ ಬ್ಯಾಗ್ ಮತ್ತು ಇತರ ವಸ್ತುಗಳನ್ನು ಸಹ ವಿತರಣೆ ಮಾಡುತ್ತಿದ್ದೇವೆ'' ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.
ಇದನ್ನೂ ಓದಿ:World cup 2023: ಭಾರತ ಪಾಕ್ ಪಂದ್ಯಕ್ಕೆ ಕ್ಷಣಗಣನೆ.. ಹೇಗಿದೆ ಪಿಚ್, ಹವಾಮಾನ ವರದಿ
ಮೊಟೆರಾದಲ್ಲಿ ಸಾಮಾನ್ಯ ದಿನದಲ್ಲಿ 34ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ. ಆದ್ದರಿಂದ ಜನರಿಗೆ ಕ್ಯಾಪ್‌ಗಳು ಅಗತ್ಯವಾಗಿ ಬೇಕಾಗುತ್ತವೆ. ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬರುವವರಿಗೆ ಉಚಿತ ಕ್ಯಾಪ್ಗಳನ್ನು ವಿತರಿಸುವ ಮೂಲಕ ಅದಾನಿ ತಮ್ಮ ಉಪಸ್ಥಿತಿಯನ್ನು ಪ್ರಸ್ತುತ ಪಡಿಸಲು ಬಯಸಿದ್ದಾರೆ. ಕೇವಲ ಅದಾನಿ ಮಾತ್ರವಲ್ಲ ಇಡೀ ಗುಜರಾತ್ ಉದ್ಯಮಶೀಲತೆಗೆ ಹೆಸರಾಗಿದೆ. ಮೈದಾನದ ಗೇಟ್ ಸಂಖ್ಯೆ 2ರಿಂದ ಕೇವಲ ಒಂದು ಫರ್ಲಾಂಗ್ ದೂರದಲ್ಲಿ ಪ್ರವೀಣ್ ಮತ್ತು ನಮ್ರತಾ ಎಂಬುವವರು ತಮ್ಮ ಸ್ಟಾಲ್ ಸ್ಥಾಪಿಸಿದ್ದಾರೆ.
ಪ್ರವೀಣ್ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರೆ, ನಮ್ರತಾ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೂ, ಇಂಡೋ-ಪಾಕ್ ಪಂದ್ಯದ ಸಂದರ್ಭದಲ್ಲಿ ವ್ಯಾಪಾರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಗೋಧಿ ಪಫ್‌ಗಳು, ಪಾಪ್‌ಕಾರ್ನ್ ಮತ್ತು ಲೆಂಟಿಲ್ ಚಾಟ್ ಮಾರಾಟದ ಸ್ಟಾಲ್ ಹಾಕಿದ್ದಾರೆ. ''ನಾವು ಸ್ಥಳೀಯ ನಿವಾಸಿಗಳಾಗಿದ್ದು, ಇದೇ ಮೊದಲ ಬಾರಿಗೆ ನಮ್ಮ ವ್ಯಾಪಾರದಲ್ಲಿ ಅದೃಷ್ಟಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಸ್ಟೇಡಿಯಂಗೆ ಸುಮಾರು 30 ಸಾವಿರ ಪ್ರೇಕ್ಷಕರು ಈ ಮಾರ್ಗದ ಮೂಲಕ ಹಾದು ಹೋಗುತ್ತಾರೆ. ಇವರಲ್ಲಿ 300 ಮಂದಿ ನಮ್ಮ ತಿಂಡಿಗಳನ್ನು ಖರೀದಿಸಿದರೂ ನಾವು ಲಾಭದಲ್ಲಿರುತ್ತೇವೆ'' ಎಂದು ಪ್ರವೀಣ್ ಹಾಗೂ ನಮ್ರತಾ ಹೇಳಿದರು.
ಇಷ್ಟೇ ಅಲ್ಲ, ಆಟಗಾರರ ಟಿ-ಶರ್ಟ್‌ಗಳು, ಬಣ್ಣ-ಬಣ್ಣದ ಪೀಪಿಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಜೊತೆಗೆ ಟೀಂ ಇಂಡಿಯಾದ ಕ್ಯಾಪ್‌ಗಳು, ತ್ರಿವರ್ಣ ಮುಖವರ್ಣಿಕೆಗಳು, ಧ್ವಜಗಳು, ಆಟಗಾರರ ಮುಖವಾಡಗಳು, ಸೋಡಾ ಮಾರಾಟಗಾರರು ಸಾಲು-ಸಾಲಾಗಿ ಮೈದಾನದಲ್ಲಿ ಸುತ್ತ-ಮುತ್ತಲು ನೆರೆದಿದ್ದಾರೆ. ಮೂಲತಃ ಬೇರೆ-ಬೇರೆ ವ್ಯಾಪಾರಗಳನ್ನು ಮಾಡಿಕೊಂಡು ಇದ್ದವರೂ ಕೂಡ ಮೈದಾನ ಬಳಿ ಕ್ರಿಕೆಟ್ ಅಭಿಮಾನಿಗಳಿಗೆ ಅಗತ್ಯವಾದ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಾರೆ. ಬಾಲಿವುಡ್ ಶ್ರೇಷ್ಠ ಗಾಯಕರಾದ ಅರಿಜಿತ್ ಸಿಂಗ್, ಸುಖ್ವಿಂದರ್ ಮತ್ತು ಶಂಕರ್ ಮಹಾದೇವನ್ ಸಹ ಅಭಿಮಾನಿಗಳ ಉನ್ಮಾದವನ್ನು ಹೆಚ್ಚಿಸಲಿದ್ದಾರೆ.
ಇದನ್ನೂ ಓದಿ:Cricket World Cup: ವಿಶ್ವಕಪ್ ಟಿಕೆಟ್ ಬೆಲೆ ವಿರುದ್ಧ ಉತ್ತರಪ್ರದೇಶದ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆ