ಹಮದಾಬಾದ್ (ಗುಜರಾತ್): 13ನೇ ಆವೃತ್ತಿಯ ಒನ್ಡೇ ವಿಶ್ವಕಪ್ಗೆ ಒಂದು ವರ್ಷ ಇದೆ ಎನ್ನುವಾಗ ಕ್ರಿಕೆಟ್ ವಿಶ್ಲೇಷಕರು ಮತ್ತು ಮಾಜಿ ಆಟಗಾರರು ಏಕದಿನ ಮಾದರಿಯ ಕ್ರಿಕೆಟ್ ಜನಪ್ರಿಯತೆ ಕಳೆದುಕೊಂಡಿದೆ, ಮಾದರಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕು ಎಂದು ಸಲಹೆಗಳನ್ನು ಕೊಟ್ಟಿದ್ದರು. ಆದರೆ, ಭಾರತದಲ್ಲಿ ನಡೆದ 2023ರ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ದಾಖಲೆ ಮಟ್ಟದಲ್ಲಿ ಪ್ರೇಕ್ಷಕರನ್ನು ಆಫ್ ಲೈನ್ ಹಾಗೂ ಆನ್ಲೈನ್ನಲ್ಲಿ ಪಡೆದುಕೊಂಡಿದೆ. ಏಕದಿನ ಕ್ರಿಕೆಟ್ನ ಕ್ರೇಜ್ ಇನ್ನೂ ತಗ್ಗಿಲ್ಲ ಎಂಬುದನ್ನು ಇದು ಖಾತರಿಪಡಿಸಿದೆ.
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಇದುವರೆಗೆ ಅತಿ ಹೆಚ್ಚು ಪ್ರೇಕ್ಷಕರು ಭಾಗವಹಿಸಿದ ಐಸಿಸಿ ಈವೆಂಟ್ ಎಂಬ ಇತಿಹಾಸವನ್ನು ನಿರ್ಮಿಸಿದೆ. ಏಕದಿನ ವಿಶ್ವಕಪ್ನ 48 ಪಂದ್ಯಗಳು ನಡೆದಿದ್ದು, ಇದಕ್ಕೆ 1,205,307 ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಇದು ಐಸಿಸಿ ನಡೆಸಿದ ಟೂರ್ನಿಯಲ್ಲಿ ದಾಖಲೆ ಆಗಿದೆ.
ಭಾರತದಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಒಟ್ಟು 10 ತಂಡಗಳು ವಿಶ್ವಕಪ್ಗಾಗಿ ಆಡಿದವು. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ ಪ್ರವೇಶ ಪಡೆದುಕೊಂಡವು. ಅಂತಿಮ ಪಂದ್ಯದಲ್ಲಿ ಗೆದ್ದ ಆಸ್ಟ್ರೇಲಿಯಾ 6ನೇ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ನ ಚಾಂಪಿಯನ್ ಆಗಿ ಹೊರಹೊಮ್ಮಿತು.
ನ.19ರ ಫೈನಲ್ಗೂ ಆರು ಪಂದ್ಯದ ಮೊದಲು 10 ಲಕ್ಷ ಪ್ರೇಕ್ಷಕರ ಮೈಲಿಗಲ್ಲನ್ನು ಈ ವಿಶ್ವಕಪ್ ತಲುಪಿತ್ತು. ಫೈನಲ್ ಪಂದ್ಯದ ನಂತರ ಹಳೆಯ ದಾಖಲೆ ಮುರಿದಿದ್ದು, 1.25 ವಿಲಿಯನ್ ಜನ ವಿಶ್ವಕಪ್ಗೆ ಪ್ರತ್ಯಕ್ಷವಾಗಿ ಸಾಕ್ಷ್ಯರಾಗಿದ್ದಾರೆ. ಅದರಲ್ಲೂ ಅಕ್ಟೋಬರ್ 14ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯಕ್ಕೆ ದಾಖಲೆಯ ಪ್ರೇಕ್ಷಕರು ಬಂದಿದ್ದರು.
1.25 ಮಿಲಿಯನ್ ಅಭಿಮಾನಿಗಳ ಸಂಖ್ಯೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮಾನದಂಡವಾಗಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದ 2015ರ ವಿಶ್ವಕಪ್ಗೆ 1,016,420 ಪ್ರೇಕ್ಷಕರಿಗೆ ಸಾಕ್ಷಿಯಾಗಿದ್ದರು. ಆದರೆ 2019ರ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದ ವಿಶ್ವಕಪ್ 752,000 ಅಭಿಮಾನಿ ಮಾತ್ರ ಬಂದಿದ್ದರು. ಕ್ರಿಕೆಟ್ ಜನಕರ ನಾಡಿನಲ್ಲೇ ಕಡಿಮೆ ಜನ ವೀಕ್ಷಿಸಿದ್ದರಿಂದ ಏಕದಿನ ಕ್ರಿಕೆಟ್ನ ಕ್ರೇಜ್ ಕಡಿಮೆ ಆಗಿದೆ ಎಂದು ಹೇಳಲಾಗುತ್ತಿತ್ತು.
ಡಿಜಿಟಲ್ ದಾಖಲೆ: ಆಫ್ಲೈನಲ್ನಲ್ಲಿ ಮೈದಾನಕ್ಕೆ ಬಂದು ಇಷ್ಟುಜನ ವೀಕ್ಷಿಸಿದ್ದರೆ, ಆನ್ಲೈನ್ನಲ್ಲಿ ಫೈನಲ್ ಪಂದ್ಯ ಹಳೆಯ ದಾಖಲೆಯನ್ನು ಧೂಳಿಪಟ ಮಾಡಿದೆ. ಈ ವರ್ಷ ನಡೆದ ಐಪಿಎಲ್ ವೇಳೆ 3.2 ಕೋಟಿ ಜನ ವೀಕ್ಷಿಸಿದ್ದು, ದಾಖಲೆಯಾಗಿತ್ತು. 2023ರ ವಿಶ್ವಕಪ್ ಭಾರತ vs ಪಾಕಿಸ್ತಾನ ಪಂದ್ಯವನ್ನು 3.5 ಕೋಟಿ ಪ್ರೇಕ್ಷಕರು ವೀಕ್ಷಿಸಿ ಐಪಿಎಲ್ ದಾಖಲೆ ಬ್ರೇಕ್ ಆಗಿತ್ತು. ಆದರೆ ವಿಶ್ವಕಪ್ ಫೈನಲ್ ಪಂದ್ಯ ಎಲ್ಲವನ್ನೂ ಮೀರಿಸಿದ್ದು, 5.9 ಕೋಟಿ ಜನರಿಂದ ಏಕಕಾಲದಲ್ಲಿ ವೀಕ್ಷಿಸಲ್ಪಟ್ಟಿದೆ. ಇದು ಈಗ ಡಿಜಿಟಲ್ ವೀಕ್ಷಣೆಯ ನೂತನ ದಾಖಲೆ ಆಗಿದೆ.
ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ, "ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಉತ್ತಮ ಯಶಸ್ಸನ್ನು ಕಂಡಿದೆ, ಆಟದ ಅತ್ಯುತ್ತಮ ಅಂಶಗಳನ್ನು ಪ್ರದರ್ಶಿಸುತ್ತದೆ ಮತ್ತು ವಿಶ್ವದಾದ್ಯಂತ ನೂರಾರು ಮಿಲಿಯನ್ ಅಭಿಮಾನಿಗಳಿಗೆ ತಲುಪಿದೆ. ಇದು ಕ್ರೀಡೆಯ ಸಂಭ್ರಮಾಚರಣೆಯಲ್ಲಿ ಜಾಗತಿಕವಾಗಿ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜನೆ ಮಾತ್ರವಲ್ಲದೆ ಒಂದುಗೂಡಿಸುವ ಘಟನೆಯಾಗಿದೆ. ಆಟವನ್ನು ಬೆಳೆಸುವಲ್ಲಿ ಮತ್ತು ಪ್ರಪಂಚದಾದ್ಯಂತದ ಮುಂದಿನ ಪೀಳಿಗೆಯ ಅಭಿಮಾನಿಗಳು ಮತ್ತು ಆಟಗಾರರಿಗೆ ಸ್ಫೂರ್ತಿ ನೀಡುವಲ್ಲಿ ಐಸಿಸಿ ಪ್ರಮುಖ ಪಾತ್ರವಹಿಸುತ್ತವೆ. ವಿಶ್ವಕಪ್ 2023 ಯಶಸ್ಸಿಗೆ ಸಹಕರಿಸಿದ ಎಲ್ಲಾ ಅಭಿಮಾನಿಗಳಿಗೆ ಐಸಿಸಿ ಧನ್ಯವಾದ ಹೇಳಲು ಬಯಸುತ್ತದೆ" ಎಂದಿದ್ದಾರೆ.
ಇದನ್ನೂ ಓದಿ:ಡ್ರೆಸ್ಸಿಂಗ್ ರೂಂಗೆ ತೆರಳಿ ಸೋಲಿನ ನೋವಿನಲ್ಲಿದ್ದ ಭಾರತದ ಕ್ರಿಕೆಟಿಗರಿಗೆ ಧೈರ್ಯ ತುಂಬಿದ ಮೋದಿ- ವಿಡಿಯೋ