ಚೆನ್ನೈ (ತಮಿಳುನಾಡು):ವಿಶ್ವಕಪ್ ಆರಂಭದಲ್ಲೇ ಭಾರತ ತಂಡಕ್ಕೆ ಅನಾರೋಗ್ಯದ ಸಮಸ್ಯೆ ಕಾಡಿದೆ. ಟೀಂ ಇಂಡಿಯಾದ ಸ್ಟಾರ್, ಆರಂಭಿಕ ಯುವ ಆಟಗಾರ ಶುಭಮನ್ ಗಿಲ್ ಮುಂದಿನ ಎರಡು ಪಂದ್ಯಗಳಿಗೆ ತಂಡದಲ್ಲಿ ಲಭ್ಯ ಇರುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಜ್ವರದ ಹಿನ್ನೆಲೆ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೋಚ್ ದ್ರಾವಿಡ್ ಮತ್ತು ನಾಯಕ ರೊಹಿತ್ ಶರ್ಮಾ ಹೇಳಿದ್ದರು.
ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿರುವಂತೆ, "ಟೀಂ ಇಂಡಿಯಾ ಬ್ಯಾಟರ್ ಶುಭ್‌ಮನ್ ಗಿಲ್ ಅವರು 9 ಅಕ್ಟೋಬರ್ 2023 ರಂದು ದೆಹಲಿಗೆ ತಂಡದೊಂದಿಗೆ ಪ್ರಯಾಣಿಸುವುದಿಲ್ಲ. ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ತಂಡದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಅವರು ಅಫ್ಘಾನಿಸ್ತಾನ ವಿರುದ್ಧದ ಅಕ್ಟೋಬರ್ 11 ರಂದು ದೆಹಲಿಯಲ್ಲಿ ನಡೆಯುವ ಮುಂದಿನ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ಗಿಲ್ ಚೆನ್ನೈನಲ್ಲಿ ಉಳಿಯುತ್ತಾರೆ ಮತ್ತು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ" ಎಂದಿದೆ.
ಗಿಲ್ ಬದಲಿಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಅವರು ನಾಯಕ ರೋಹಿತ್ ಶರ್ಮಾ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಕಿಶನ್ಗೆ ಅಫ್ಘಾನಿಸ್ತಾನದ ವಿರುದ್ಧ ಅವಕಾಶ ಸಿಗುತ್ತದಾ ಅಥವಾ ಕೆ ಎಲ್ ರಾಹುಲ್ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಮುಂದಿರುವ ಪ್ರಶ್ನೆ. ಕಿಶನ್ ಆರಂಭಿಕರಾಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಗುರುತಿಸಿಕೊಂಡಿದ್ದಾರೆ. ಆದರೆ ಆಸ್ಟ್ರೇಲಿಯಾದ ವಿರುದ್ಧದ ವಿಫಲತೆ ಬೆಂಚ್ ಕಾಯಲು ಕಾರಣವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.