ಅಹಮದಾಬಾದ್ (ಗುಜರಾತ್):ಕಳೆದ ಮೂರು ವಿಶ್ವಕಪ್ಗಳನ್ನು ಆತಿಥ್ಯ ವಹಿಸಿದ ದೇಶಗಳು ಗೆದ್ದುಕೊಂಡಿವೆ ಎಂದು ಟ್ರೋಫಿ ಗೆಲ್ಲುವ ಕನಸಿನ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಆಯೋಜಿಸಿದ್ದ 'ಕ್ಯಾಪ್ಟನ್ಸ್ ಡೇ' ಕಾರ್ಯಕ್ರಮದಲ್ಲಿ ಹೇಳಿದರು. ಈ ಮೂಲಕ 140 ಕೋಟಿ ಭಾರತೀಯರ ನಿರೀಕ್ಷೆಗಳು ಗರಿಗೆದರಿವೆ.
"ತಂಡದ ಪ್ರತಿಯೊಬ್ಬ ಆಟಗಾರನಿಗೂ ತನ್ನ ಪಾತ್ರ ಮತ್ತು ಜವಾಬ್ದಾರಿಯ ಅರಿವಿದೆ. ನಾವೆಲ್ಲರೂ ಒಂದು ವಿಚಾರವನ್ನು ಕೇಂದ್ರೀಕರಿಸಬೇಕಿದೆ. ಎಲ್ಲರೂ ತಂಡವಾಗಿ ಪ್ರದರ್ಶನ ನೀಡುವುದು ಮುಖ್ಯ. ಇದು ಸುದೀರ್ಘ ಟೂರ್ನಿ. ನಾವು ಪ್ರತಿ ಪಂದ್ಯದ ಫಲಿತಾಂಶವನ್ನು ಅಂದು ಏನು ನಡೆಯಿತು ಎಂಬುದನ್ನು ಅರಿತು ಮುಂದೆ ಸಾಗಬೇಕಿರುತ್ತದೆ. ನಮ್ಮ ಗುರಿ ಮತ್ತು ಉದ್ದೇಶ ಒಂದೇ ಕಡೆಗೆ ಕೇಂದ್ರೀಕೃತವಾಗಿರುತ್ತವೆ" ಎಂದರು.
ಭಾರತ ತಂಡ ಅಕ್ಟೋಬರ್ 8 ರಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಪಂದ್ಯ ಆಡಲಿದೆ. ಇತ್ತೀಚಿನ ಏಷ್ಯಾಕಪ್ ವಿಜಯದ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ 2-1ರಿಂದ ಗೆದ್ದುಕೊಂಡಿದೆ. ರೋಹಿತ್ ಶರ್ಮಾ ಟೀಂ ಈ ಸರಣಿಯ ಫಲಿತಾಂಶ ಮತ್ತು ಏಷ್ಯಾಕಪ್ ಗೆಲುವಿನಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇನ್ನೊಂದೆಡೆ, ಭಾರತದ ಎರಡು ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದ್ದು, ರದ್ದಾಗಿತ್ತು.
"ನಾವು ನಿರೀಕ್ಷೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಅದು ಯಾವಾಗಲೂ ತಂಡದ ಮೇಲಿರುತ್ತದೆ. ನಾವು ಯಾರ ವಿರುದ್ಧ ಆಡುತ್ತಿದ್ದೇವೆ. ಅದರ ಫಲಿತಾಂಶ ಏನಾಗುತ್ತದೆ ಎಂಬುದರ ಕುರಿತು ಚಿಂತೆ ಮಾಡಬೇಕಿಲ್ಲ. ನಮ್ಮ ಪಂದ್ಯಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕು ಮತ್ತು ಫಲಿತಾಂಶವನ್ನು ಅಲ್ಲೇ ಬಿಟ್ಟು, ಮುಂದಿನ ಆಟಕ್ಕೆ ಸಿದ್ಧವಾಗಬೇಕು" ಎಂದರು.
ವಿಶ್ವಕಪ್‌ಗೆ ಮುಂಚಿನ ಸಿದ್ಧತೆಗಳು ಆಟಗಾರರಿಗೆ ಒತ್ತಡದಿಂದ ಹೊರಬರುವಂತೆ ಮಾಡುತ್ತವೆ ಎಂದು ರೋಹಿತ್ ಶರ್ಮಾ ಹೇಳಿದರು. "ಒತ್ತಡವನ್ನು ಮರೆತುಬಿಡಿ ಎಂದು ಹೇಳುವುದು ತುಂಬಾ ಸುಲಭ. ಆದರೆ ಅದು ಕಠಿಣ. ನಾವು ನಿಜವಾಗಿಯೂ ಚೆನ್ನಾಗಿ ತಯಾರಿ ನಡೆಸಿದ್ದೇವೆ. ಚೆನ್ನಾಗಿ ತಯಾರಿ ನಡೆಸಿರುವವರೆಗೆ, ಆಟವಾಡಲು ಸಾಕಷ್ಟು ಆತ್ಮವಿಶ್ವಾಸ ನೀಡುತ್ತದೆ" ಎಂದರು.
"ನಾವು 8 ರಂದು ಚೆನ್ನೈನಲ್ಲಿ ಟೂರ್ನಿ ಪ್ರಾರಂಭಿಸುತ್ತೇವೆ ಮತ್ತು ಈ ಪಂದ್ಯಾವಳಿಯಲ್ಲಿ ನಾವು ಆಡುವ ಪ್ರತಿಯೊಂದು ಆಟದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ಪ್ರತಿ ಆಟದಲ್ಲೂ ಮೇಲುಗೈ ಸಾಧಿಸಲು ಸಿದ್ಧರಿರಬೇಕು. ಚೆನ್ನೈನ ಮೈದಾನ ಮತ್ತು ಪರಿಸ್ಥಿತಿಗೆ ತಕ್ಕಂತೆ ತಂಡವನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತೇವೆ. ನಂತರ ಪಂದ್ಯದಲ್ಲಿ, ಆ ದಿನ ನಾವು ತೋರಿಸುವ ನಮ್ಮ ಕೌಶಲ್ಯ, ಪ್ರತಿಭೆ ಮತ್ತು ಪ್ರಯತ್ನದ ಮೇಲೆ ಫಲಿತಾಂಶ ಇರುತ್ತದೆ. ಆಡುವ 11ರ ಬಳಗದ ಆಯ್ಕೆ ತುಂಬಾ ಕಷ್ಟದ್ದು. ಆಯಾ ಪರಿಸ್ಥಿತಿಗೆ ಹೊಂದಿಕೊಂಡು ಯೋಚಿಸಬೇಕಿದೆ" ಎಂದಿದ್ದಾರೆ.
ಇದನ್ನೂ ಓದಿ:ಕಳೆದ ವಿಶ್ವಕಪ್ ಪಂದ್ಯದಲ್ಲಿ ಟೀಕೆಗೊಳಗಾದ ನಿಯಮಕ್ಕೆ ತಿದ್ದುಪಡಿ: ಹೊಸ ರೂಲ್ ಹೀಗಿದೆ..