ಕರ್ನಾಟಕ

karnataka

ETV Bharat / sports

ಐಸಿಸಿ ನಿಯಮ ಉಲ್ಲಂಘನೆ: ಅಫ್ಘಾನಿಸ್ತಾನ​ ಆರಂಭಿಕ ಆಟಗಾರ ಗುರ್ಬಾಜ್​ಗೆ ವಾಗ್ದಂಡನೆ - ETV Bharath Karnataka

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ರನೌಟಾದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್‌ ಅವರು ಐಸಿಸಿ ನಿಯಮ ಉಲ್ಲಂಘಿಸಿದ್ದು ವಾಗ್ದಂಡನೆ ವಿಧಿಸಲಾಗಿದೆ.

Rahmanullah Gurbaz
Rahmanullah Gurbaz

By PTI

Published : Oct 17, 2023, 5:25 PM IST

ದುಬೈ: ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡವನ್ನು 69 ರನ್‌ಗಳಿಂದ ಮಣಿಸಿದ ಅಫ್ಘಾನಿಸ್ತಾನ ಅಚ್ಚರಿಯ ಗೆಲುವು ಕಂಡಿತ್ತು. ಸತತ 14 ವಿಶ್ವಕಪ್ ಪಂದ್ಯಗಳ ಸೋಲಿನ ನಂತರ ಅಪರೂಪದ ಗೆಲುವಿನ ಸಿಹಿ ಅನುಭವಿಸಿತ್ತು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ​ದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್‌ಗೆ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ವಾಗ್ದಂಡನೆ ವಿಧಿಸಿದೆ.

ರಹಮಾನುಲ್ಲಾ ಗುರ್ಬಾಜ್‌ 80 ರನ್​ ಗಳಿಸಿ ಆಡುತ್ತಿದ್ದಾಗ ರನೌಟ್​ಗೆ ಬಲಿಯಾದರು. ಮೈದಾನದಲ್ಲೇ ಕುಪಿತಗೊಂಡ ಅವರು ಬ್ಯಾಟ್​ನಿಂದ ನೆಲಕ್ಕೆ ಹೊಡೆದರು. ಮೈದಾನದಿಂದ ಹೊರಬರುವಾಗ ಬೌಂಡರಿ ಗೆರೆಗೆ ಬ್ಯಾಟ್​ನಿಂದ ಮತ್ತೆ ಹೊಡೆದಿದ್ದಲ್ಲದೇ, ಡಗೌಟ್​ನಲ್ಲಿದ್ದ ಚೇರ್​ಗೂ ಹಾನಿ ಮಾಡಿದ್ದರು. ಹೀಗಾಗಿ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆ ಹೇರಲಾಗಿದೆ.

ಕ್ರಿಕೆಟಿಗರಿಗೆ ಐಸಿಸಿ ನಿಯಮವೇನು?: ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2ರ ಪ್ರಕಾರ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿ ಪಂದ್ಯದ ಸಂದರ್ಭದಲ್ಲಿ ಕ್ರಿಕೆಟ್ ಉಪಕರಣ ಅಥವಾ ಬಟ್ಟೆ, ಮೈದಾನದಲ್ಲಿರುವ ಉಪಕರಣಗಳು, ಅಲ್ಲಿರುವ ಇತರೆ ವಸ್ತುಗಳಿಗೆ ಹಾನಿ, ದುರುಪಯೋಗ ಮಾಡಿಕೊಳ್ಳುವಂತಿಲ್ಲ.

ಅಫ್ಘಾನಿಸ್ತಾನದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಔಟಾಗಿ ಹೊರನಡೆಯುವಾಗ ಅವರು ಬೌಂಡರಿ ಹಗ್ಗ ಮತ್ತು ಕುರ್ಚಿಯ ಮೇಲೆ ತನ್ನ ಬ್ಯಾಟ್‌ನಿಂದ ಹೊಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಐಸಿಸಿ ಎಲೀಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರೀಸ್‌ನ ಜೆಫ್ ಕ್ರೋವ್ ಅವರು ಗುರ್ಬಾಜ್​ ವಿರುದ್ಧ ಆರೋಪ ಮಾಡಿದ್ದರು. ಆರಂಭಿಕ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಅಂಕ ಸೇರಿಸಿದ್ದಾರೆ. ಇದು 24 ತಿಂಗಳ ಅವಧಿಯಲ್ಲಿ ಮೊದಲ ಅಪರಾಧವಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಆಟಗಾರ 4 ಅಥವಾ ಅದಕ್ಕಿಂತ ಹೆಚ್ಚಿನ ಡಿಮೆರಿಟ್​ ಅಂಕ ಪಡೆದರೆ ಆಟಗಾರನನ್ನು ನಿಷೇಧಿಸಲಾಗುತ್ತದೆ.

ಗುರ್ಬಾಜ್​ ಮೊದಲ ಅಪರಾಧ ಮಾಡಿದ್ದರಿಂದ ವಾಗ್ದಂಡನೆ ವಿಧಿಸಲಾಗಿದೆ. ಐಸಿಸಿ 2.2 ನಿಯಮ ಉಲ್ಲಂಘನೆಗೆ ಕನಿಷ್ಠ ವಾಗ್ದಂಡನೆಯಾದರೆ, ಆಟಗಾರನ ಪಂದ್ಯ ಶುಲ್ಕದ ಗರಿಷ್ಠ 50 ಪ್ರತಿಶತ ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡುವ ಅವಕಾಶ ಐಸಿಸಿ ಎಲೀಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳಿಗಿರುತ್ತದೆ. ಅಪರಾಧಕ್ಕೆ ತಕ್ಕುದಾದ ದಂಡನೆ ವಿಧಿಸುತ್ತಾರೆ.

ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಗೆಲುವು​:ದೆಹಲಿಯ ಫಿರೋಜ್​ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಸ್ಪಿನ್​ ದಾಳಿಯ ಮುಂದೆ ಇಂಗ್ಲೆಂಡ್​ ಬ್ಯಾಟರ್​ಗಳು ಮಂಡಿಯೂರಿದ್ದರು. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಅಫ್ಘಾನ್​ ತಂಡದ ಗುರ್ಬಾಜ್​ ಮತ್ತು ಇಕ್ರಮ್​ ಅವರ ಅರ್ಧಶತಕ ಮತ್ತು ಕೆಳಕ್ರಮಾಂಕದ ಆಟಗಾರರ ಬ್ಯಾಟಿಂಗ್​ ನೆರವಿನಿಂದ ತಂಡ 284 ರನ್​ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಆಂಗ್ಲರಿಗೆ ಅಫ್ಘಾನ್​ ಸ್ಪಿನ್ನರ್​ಗಳು ಕಾಡಿದ್ದರು. ಇದರಿಂದಾಗಿ 40.3 ಓವರ್​ಗಳಿಗೆ 215 ರನ್​ಗಳಿಗೆ ಇಂಗ್ಲೆಂಡ್​ ಸರ್ವಪತನ ಕಂಡು ತಂಡ 69 ರನ್‌ಗಳಿಂದ​ ಸೋಲುಂಡಿತ್ತು.

ಇದನ್ನೂ ಓದಿ:ವಿಶ್ವಕಪ್​ ಕ್ರಿಕೆಟ್​​: ಮಳೆಯಿಂದಾಗಿ ದಕ್ಷಿಣ ಆಫ್ರಿಕಾ-ನೆದರ್ಲೆಂಡ್‌ ಪಂದ್ಯ ವಿಳಂಬ; 7 ಓವರ್​ ಕಡಿತ

ABOUT THE AUTHOR

...view details