ನವದೆಹಲಿ:ಮೂರನೇ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತನ್ನ ಅಂತಿಮ 15 ಆಟಗಾರರ ತಂಡವನ್ನು ಗುರುವಾರ ಪ್ರಕಟಿಸಿದೆ. ಕೊನೆಯ ಕ್ಷಣದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಗಾಯಗೊಂಡಿರುವ ಅಕ್ಷರ್ ಪಟೇಲ್ ಬದಲಿಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್ಗೆ ಈಗಾಗಲೇ ಬಲಿಷ್ಠ 15 ಆಟಗಾರರ ತಾತ್ಕಾಲಿಕ ತಂಡವನ್ನು ಭಾರತ ಘೋಷಿಸಿತ್ತು. ಅಂತಿಮ ತಂಡದ ಪಟ್ಟಿ ನೀಡಲು ಇಂದು (ಸೆಪ್ಟೆಂಬರ್ 28) ಕೊನೆಯ ದಿನವಾಗಿತ್ತು. ಹೀಗಾಗಿ ಕೊನೆಯ ದಿನದಂದು ಒಂದು ಬದಲಾವಣೆಯ ಜೊತೆಗೆ ತಂಡವನ್ನು ಅಂತಿಮಗೊಳಿಸಿದೆ.
ಅಶ್ವಿನ್ ಇನ್ ಅಕ್ಷರ್ ಔಟ್:ಏಷ್ಯಾ ಕಪ್ ಟೂರ್ನಿಯ ವೇಳೆ ಬಾಂಗ್ಲಾದೇಶದ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆಗೆ ಒಳಗಾಗಿದ್ದು, ತಂಡ ಪ್ರಕಟಣೆಯ ಅಂತಿಮ ಗಡುವಿನವರೆಗೂ ಗುಣಮುಖರಾಗದ ಕಾರಣ ಕೈಬಿಡಲಾಗಿದೆ. ಇದರಿಂದ ಯುವ ಆಲ್ರೌಂಡರ್ ಅಕ್ಷರ್ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ಸರಣಿಯ ಮೂರನೇ ಪಂದ್ಯದಲ್ಲಿ ಅಕ್ಷರ್ ಸ್ಥಾನ ಪಡೆದಿದ್ದರು. ಆದರೆ, ಗಾಯದ ಕಾರಣ ಆಡಿರಲಿಲ್ಲ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ಆರ್. ಅಶ್ವಿನ್ ಉತ್ತಮ ಕಮ್ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಅಕ್ಷರ್ ಪಟೇಲ್ ಗಾಯ ಮತ್ತು ಸುಧಾರಿತ ಪ್ರದರ್ಶನದಿಂದಾಗಿ ಹಿರಿಯ ಸ್ಪಿನ್ನರ್ಗೆ ಮತ್ತೊಂದು ಅವಕಾಶ ನೀಡಲಾಗಿದೆ. 37 ವರ್ಷದ ಅಶ್ವಿನ್ 2011 ಮತ್ತು 2015 ರ ವಿಶ್ವಕಪ್ನಲ್ಲಿ ಭಾರತದ ಪರವಾಗಿ 8 ಪಂದ್ಯಗಳಲ್ಲಿ ಆಡಿದ್ದು, 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ಅವರ ಮೂರನೇ ವಿಶ್ವಕಪ್ ಆಗಿದೆ.
ಯಜುವೇಂದ್ರ ಚಹಲ್ಗಿಲ್ಲ ಚಾನ್ಸ್:ಭಾರತ ತಂಡದ ಪರವಾಗಿ ಆಡಿದ್ದ ಬಲಗೈ ಮಣಿಕಟ್ಟು ಸ್ಪಿನ್ನರ್ ಯಜುವೇಂದ್ರ ಚಹಲ್ ಇದ್ದ ಕೊನೆಯ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ತಂಡದಲ್ಲಿ ಈಗಾಗಲೇ ಮೊದಲ ಆಯ್ಕೆಯ ಸ್ಪಿನ್ನರ್ ಆಗಿ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಇದ್ದಾರೆ.
ಪರಿಷ್ಕೃತ ಅಂತಿಮ ಭಾರತ ತಂಡ ಇಂತಿದೆ:ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.
ಇದನ್ನೂ ಓದಿ:ವಿಶ್ವಕಪ್ ಬಳಿಕ ನಾಯಕತ್ವ, 2025 ರ ಬಳಿಕ ಕ್ರಿಕೆಟ್ನಿಂದ ನಿವೃತ್ತಿ: ಬಾಂಗ್ಲಾ ಕ್ರಿಕೆಟರ್ ಶಕೀಬ್ ಅಲ್ ಹಸನ್