ಕರ್ನಾಟಕ

karnataka

By ETV Bharat Karnataka Team

Published : Oct 1, 2023, 10:45 PM IST

ETV Bharat / sports

ಶೂನ್ಯದಿಂದ ಸ್ಟಾರ್​ ಪಟ್ಟ! ಟೀಂ ಇಂಡಿಯಾ ವೇಗದ ಬೌಲರ್ ಮಹಮ್ಮದ್​ ಸಿರಾಜ್ ರೋಚಕ ಕಹಾನಿ

2023ರ ವಿಶ್ವಕಪ್​ನಲ್ಲಿ ಭಾರತದ ಸ್ಟಾರ್​ ಬೌಲರ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವವರು ಮೊಹಮ್ಮದ್​ ಸಿರಾಜ್​. ಝಿರೋದಿಂದ ಸ್ಟಾರ್‌ಗಿರಿವರೆಗೆ ಅವರೇ ಹಂಚಿಕೊಂಡ ಕಹಾನಿ ಹೀಗಿದೆ..

Mohammed Siraj
Mohammed Siraj

ಹೈದರಾಬಾದ್:ಭಾರತ ಕ್ರಿಕೆಟ್‌ ತಂಡದಲ್ಲಿ ಜಸ್ಪ್ರೀತ್​ ಬುಮ್ರಾ ಗಾಯಗೊಂಡು ಹೊರಗುಳಿದಾಗ ಮಹಮ್ಮದ್​ ಸಿರಾಜ್​ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಖಾಯಂ ಆಟಗಾರನಾಗಿ ಬೆಳೆದರು. ಅಲ್ಲದೇ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಆಕರ್ಷಕ ಪ್ರದರ್ಶನ ನೀಡುತ್ತಾ ತಮ್ಮದೇ ಛಾಪು ಮೂಡಿಸಿದರು. ಈಗ ಆಡುವ 11ರ ಬಳಗದಲ್ಲಿ ಸಿರಾಜ್​ ಇಲ್ಲದಿದ್ದರೆ ತಂಡ ವೀಕ್​ ಎಂದು ಕರೆಸಿಕೊಳ್ಳುತ್ತದೆ. ಇದಕ್ಕೆ ಅವರು ಏಷ್ಯಾಕಪ್​ ಫೈನಲ್​ನಲ್ಲಿ ಒಂದು ಓವರ್​ನಲ್ಲಿ ನಾಲ್ಕು ವಿಕೆಟ್​ ಪಡೆದಿರುವುದೇ ಒಂದು ಪ್ರಮುಖ ನಿದರ್ಶನ.

'ಮಿಯಾನ್ ಮ್ಯಾಜಿಕ್' ಎಂದೇ ಖ್ಯಾತರಾಗಿರುವ ಭಾರತದ ವೇಗಿ ಮಹಮ್ಮದ್​ ಸಿರಾಜ್ ಅತ್ಯಂತ ಕಡಿಮೆ ಅವಧಿಯಲ್ಲಿ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲೂ ಭಾರತದ ಮುಂಚೂಣಿ ಬೌಲರ್ ಎನಿಸಿಕೊಂಡಿದ್ದಾರೆ. ಅಂಕಿಅಂಶಗಳಿಂದ ಮಾತ್ರವಲ್ಲ ಇಂದಿನ ಪೀಳಿಗೆಗೆ ಸಿರಾಜ್ ಹಿನ್ನೆಲೆಯೂ ಸ್ಫೂರ್ತಿಯಾಗಬಲ್ಲದು.

10ನೇ ತರಗತಿಗೆ ಶಿಕ್ಷಣ ತೊರೆದ ಸಿರಾಜ್​:ಸಿರಾಜ್​ ಏಳನೇ ತರಗತಿಯಲ್ಲಿ ಶಾಲಾ ತಂಡಕ್ಕಾಗಿ ಆಡುವ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಮೊದಮೊದಲು ಬ್ಯಾಟರ್ ಆಗಿದ್ದ ಅವರು 10ನೇ ತರಗತಿಗೆ ಬಂದಾಗ ಬೌಲರ್ ಆದರು. ಕ್ರಮೇಣ ಶಿಕ್ಷಣ ತೊರೆದರು. ಮನೆ ಸಮೀಪದ ಮೈದಾನದಲ್ಲಿ ಪ್ರತಿನಿತ್ಯ ಟೆನಿಸ್ ಬಾಲ್ ಪಂದ್ಯಗಳನ್ನು ಆಡುತ್ತಿದ್ದರು.

"ನನ್ನ ಅಣ್ಣ ಇಂಜಿನಿಯರಿಂಗ್ ಓದುತ್ತಿದ್ದಾರೆ. ನೀನು ಆಟ ಆಡುತ್ತಾ ಕಾಲ ಕಳೆಯುತ್ತಿದ್ದೀಯ" ಎಂದು ಸಿರಾಜ್ ಮೇಲೆ ಕೋಪಗೊಂಡು ಅಮ್ಮ ಒಮ್ಮೆ ಬೈದಿದ್ದರಂತೆ. ಆದರೆ ತಂದೆ ಸಿರಾಜ್​ಗೆ ನೀಡಿದ ಪ್ರೋತ್ಸಾಹ ಇಂದು ಅವರನ್ನು ಕ್ರಿಕೆಟ್​ನಲ್ಲಿ ಸ್ಟಾರ್​ ಆಗಿ ಗುರುತಿಸಿದೆ. ತಂದೆ ಆಟೋ ಓಡಿಸಿ ಬಂದ ಹಣದಿಂದ ಮಗನಿಗೆ ಪಾಕೆಟ್ ಮನಿ ಕೊಡುತ್ತಿದ್ದರಂತೆ.

ಚಿಕ್ಕಪ್ಪನ ಕ್ಲಬ್​ ಕ್ರಿಕೆಟ್​ನಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ..:ಮೊಹಮ್ಮದ್ ಸಿರಾಜ್ ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತನಾಡುತ್ತಾ, "ನನ್ನ ತಾಯಿ ಚಿಕ್ಕಪ್ಪನ ಬಳಿ ನನ್ನ ಜೀವನದ ಬಗ್ಗೆ ಚಿಂತಿತರಾಗಿ ಒಮ್ಮೆ ಮಾತನಾಡಿದ್ದರು. ಕ್ರಿಕೆಟ್​ ಕ್ಲಬ್​ ಹೊಂದಿದ್ದ ಚಿಕ್ಕಪ್ಪ, ಅವರ ಕ್ಲಬ್​ನಲ್ಲಿ ನನಗೆ ಆಡಲು ಅವಕಾಶ ಕೊಟ್ಟರು. ಅಲ್ಲಿ ಒಂದು ಪಂದ್ಯದಲ್ಲಿ 9 ವಿಕೆಟ್​ ಪಡೆದಿದ್ದೆ. ಇದಾದ ನಂತರ ಚಿಕ್ಕಪ್ಪ ತಾಯಿಯ ಬಳಿ ಬಂದು ನನ್ನ ಬಗ್ಗೆ ಚಿಂತೆ ಬಿಡುವಂತೆ ಹೇಳಿದ್ದರು. ಅಲ್ಲಿಂದ ತಾಯಿಯ ಮನಸ್ಸು ಬದಲಾಯಿತು. ಆ ದಿನಗಳಲ್ಲಿ ಪ್ರತಿ ಪಂದ್ಯಕ್ಕೆ ರೂ. 500 ತೆಗೆದುಕೊಂಡಿದ್ದು ನನಗಿನ್ನೂ ನೆನಪಿದೆ. 19ನೇ ವಯಸ್ಸಿನಲ್ಲಿ ಗ್ರೇಸ್‌ಬಾಲ್‌ನೊಂದಿಗೆ ಮೊದಲ ಬಾರಿಗೆ ಐದು ವಿಕೆಟ್‌ ಪಡೆದಿದ್ದೆ" ಎಂದರು.

"2016ರಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಐಪಿಎಲ್ ಪಂದ್ಯವಿತ್ತು. ನಾನು ಅಲ್ಲಿಗೆ ನೆಟ್ ಬೌಲರ್ ಆಗಿ ಹೋಗಿದ್ದೆ. ಅಷ್ಟೊತ್ತಿಗಾಗಲೇ ನಾನು ಎರಡು ರಣಜಿ ಪಂದ್ಯಗಳನ್ನೂ ಆಡಿದ್ದೆ. ಆರ್‌ಸಿಬಿಯ ಬೌಲಿಂಗ್ ಕೋಚ್ ಆಗಿದ್ದ ಭರತ್ ಅರುಣ್ ಸರ್ ನನ್ನನ್ನು ನೋಡಿದ್ದರು. ಅದು ನನ್ನ ಅದೃಷ್ಟ. ಭರತ್ ಸರ್ ಆ ವರ್ಷ ಹೈದರಾಬಾದ್ ರಣಜಿ ತಂಡಕ್ಕೆ ತರಬೇತುದಾರರಾಗಿ ಬಂದರು. ನಾನು ಆಗ ರಣಜಿ ತಂಡದಲ್ಲಿ ಇರಲಿಲ್ಲ. ಆದರೆ ವಿ.ವಿ.ಎಸ್.ಲಕ್ಷ್ಮಣ್ ಸರ್ ನನ್ನನ್ನು ಆಯ್ಕೆ ಮಾಡಬೇಕೆಂದು ಭರತ್ ಒತ್ತಾಯಿಸಿದರು. ನಾನು ಆ ಋತುವಿನಲ್ಲಿ 45 ವಿಕೆಟ್‌ಗ​​ಳನ್ನು ಪಡೆದಿದ್ದೆ."

ಐಪಿಎಲ್​ನಿಂದ ಬದಲಾದ ಭವಿಷ್ಯ:"2017ರ ಐಪಿಎಲ್ ಸೀಸನ್ ಆಟಗಾರರ ಹರಾಜಿನಲ್ಲಿ, ನನ್ನ ಹೆಸರನ್ನು ಘೋಷಿಸಲಾಯಿತು. ನನ್ನ ಹೆಸರನ್ನು ಪ್ರಸ್ತಾಪಿಸಿದಾಗ ಯಾರೂ ಯಾವುದೇ 10 ಸೆಕೆಂಡುಗಳವರೆಗೆ ಯಾವುದೇ ಬಿಡ್ ಮಾಡಲಿಲ್ಲ. ನಂತರ ಆರ್​ಸಿಬಿ ಪ್ರತಿಕ್ರಿಯಿಸಿತು. ನಾನು ನನ್ನ ಸ್ನೇಹಿತರೊಂದಿಗೆ ಸಂತೋಷದಿಂದ ಹೊರಬಂದೆ. ಮನೆಗೆ ಬಂದಾಗ, ಸನ್‌ರೈಸರ್ಸ್ ತಂಡ 2.6 ಕೋಟಿ ರೂ.ಗೆ ನನ್ನನ್ನು ಬಿಡ್​ ಮಾಡಿತ್ತು. ಆಗ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೆವು. ನಂತರ ಕೆಲವೇ ತಿಂಗಳಲ್ಲಿ ಸ್ವಂತ ಮನೆ ಖರೀದಿಸಿದ್ದೆವು. ಆ ದಿನ ನಾನು ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ ಎಂಬ ಸಂತೃಪ್ತಿ ನನಗಿತ್ತು" ಎಂದರು.

ವಿರಾಟ್ ಕೊಹ್ಲಿಯಿಂದ ಶಿಸ್ತು ಕಲಿತ ಸಿರಾಜ್​:"ಆ ಋತುವಿನಲ್ಲಿ ಆರು ಪಂದ್ಯಗಳ ನಂತರ, ನನಗೆ ಆಡಲು ಅವಕಾಶ ಸಿಕ್ಕಿತು. ಕ್ರೀಡಾಂಗಣ ತುಂಬಿತ್ತು. ನಾನು ಮೊದಲ ಬಾರಿಗೆ ಇಷ್ಟು ಜನರ ಮುಂದೆ ಆಡುತ್ತಿದ್ದೆ. ಆ ದಿನ ನನಗೆ ಒತ್ತಡ ಏನೆಂದು ತಿಳಿದಿತ್ತು. ಮೊದಲ ಮೂರು ಎಸೆತಗಳು ಬೌಂಡರಿಗಳು. ಯಾವಾಗ ನಾಲ್ಕನೇ ಎಸೆತದಲ್ಲಿ ವಿಕೆಟ್ ಬಿದ್ದಿತೋ ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಅದೇ ವರ್ಷದಲ್ಲಿ, ನಾನು ಭಾರತಕ್ಕಾಗಿ ಟಿ20ಯಲ್ಲಿ ಸ್ಥಾನ ಪಡೆದೆ. ಆದರೆ ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆರ್​ಸಿಬಿ ತಂಡವು 2018ರಲ್ಲಿ ಖರೀದಿಸಿತು. ಅಲ್ಲಿ ಬಹಳಷ್ಟು ಕಲಿತೆ. ಅದರಲ್ಲೂ ವಿರಾಟ್ ಕೊಹ್ಲಿಯಿಂದ ಕೆಲಸದಲ್ಲಿ ಶಿಸ್ತು ನೋಡಿಕೊಂಡೆ" ಎಂದರು.

ಟ್ರೋಲ್​ನಿಂದ ಸ್ಟಾರ್‌ಗಿರಿ ಸಾಧನೆ:ಐಪಿಎಲ್​ನಲ್ಲಿ ಸಿರಾಜ್​ ಹೆಚ್ಚು ಟ್ರೋಲ್‌ಗೊಳಗಾದ ಆಟಗಾರನೂ ಹೌದು. ತಂಡದ ಪರ ವಿಕೆಟ್​ ಪಡೆಯುತ್ತಿದ್ದರೂ, ಹೆಚ್ಚು ರನ್​ ಬಿಟ್ಟುಕೊಡುತ್ತಿದ್ದ ಕಾರಣ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್​ ಮಾಡಲಾಗುತ್ತಿತ್ತು. ‘ಆಟೋ ಓಡಿಸಿ’ ಎಂದು ಅವರ ಬಳಿ ಹೇಳಿದವರಿದ್ದಾರೆ. ನಾಲ್ಕು ಓವರ್‌ಗಳಲ್ಲಿ 40 ರನ್ ಕೊಟ್ಟರೆ ಮನಸ್ಸಿಗೆ ನೆಮ್ಮದಿ ಇಲ್ಲ ಎನ್ನುವುದು ಬಹುತೇಕ ಫಿಕ್ಸ್ ಆಗಿತ್ತು. ಆದರೆ ಅದಕ್ಕವರು ಎದೆಗುಂದಲಿಲ್ಲ. ತಮ್ಮ ಪ್ರದರ್ಶನದ ಮೂಲಕವೇ ತಂಡದಲ್ಲಿ ತಾನೊಬ್ಬ ಉತ್ತಮ ಆಟಗಾರ ಎಂಬುದನ್ನು ಸಾಬೀತು ಮಾಡಿದರು.

"ನಾನು ಕ್ರಿಕೆಟಿಗನಾಗಿದ್ದರೆ, ಅದು ಹೆತ್ತವರ ಕೊಡುಗೆ. ನಾನು ಅವರ ಜೀವನ ಉತ್ತಮವಾಗಿರಬೇಕೆಂದು ಬಯಸುತ್ತೇನೆ. ಆದರೆ ನನ್ನ ಸಾಧನೆಯನ್ನು ಸಂಪೂರ್ಣವಾಗಿ ನೋಡದೆ ತಂದೆ ನಿಧನರಾದರು. ಅವರ ಆರೋಗ್ಯ ಹದಗೆಟ್ಟಿದೆ ಎಂದು ಅವರು ನನಗೆ ಹೇಳಲಿಲ್ಲ. 2021ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಅವರು ನಿಧನರಾದರು" ಎಂದು ಬೇಸರಿಸಿದರು.

ಇದನ್ನೂ ಓದಿ:ವಿಶ್ವಕಪ್‌ ಕ್ರಿಕೆಟ್‌: ಭಾರತ ತಂಡ ಪ್ರತಿನಿಧಿಸಿದ ಕನ್ನಡಿಗರು ಯಾರೆಲ್ಲಾ? ಸಂಪೂರ್ಣ ಮಾಹಿತಿ..

ABOUT THE AUTHOR

...view details