ಪುಣೆ (ಮಹಾರಾಷ್ಟ್ರ):13 ನೇ ಆವೃತ್ತಿಯ ವಿಶ್ವಕಪ್ನ 5 ಪಂದ್ಯಗಳಿಗೆ ಮಹಾರಾಷ್ಟ್ರದ ಪುಣೆಯ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ವಿಶೇಷವೆಂದರೆ, 27 ವರ್ಷಗಳ ಬಳಿಕ ಈ ಮೈದಾನದಲ್ಲಿ ವಿಶ್ವಕಪ್ ಪಂದ್ಯಗಳು ಆಯೋಜನೆಯಾಗುತ್ತಿವೆ. ಇಲ್ಲಿ ಕೊನೆಯ ಬಾರಿಗೆ 1996 ರ ವಿಶ್ವಕಪ್ನ ವೆಸ್ಟ್ ಇಂಡೀಸ್ ಮತ್ತು ಕೀನ್ಯಾ ನಡುವಿನ ಪಂದ್ಯ ನಡೆದಿತ್ತು.
2011 ರಲ್ಲಿ ಭಾರತ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಜಂಟಿ ಸಹಭಾಗಿತ್ವದಲ್ಲಿ ವಿಶ್ವಕಪ್ನ ಆತಿಥ್ಯ ವಹಿಸಿದ್ದಾಗ, ಪುಣೆ ಮೈದಾನದಲ್ಲಿ ಒಂದೇ ಒಂದು ಪಂದ್ಯವೂ ನಡೆದಿರಲಿಲ್ಲ. ಕಳೆದ ಸಲ ಕೈತಪ್ಪಿದ್ದ ಅವಕಾಶವನ್ನು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಈ ಬಾರಿ ಬಾಚಿಕೊಂಡಿದೆ.
ಅದರಲ್ಲೂ ಅಕ್ಟೋಬರ್ 19 ರಂದು ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ಪಂದ್ಯವು ಪ್ರಮುಖ ಆಕರ್ಷಣೆಯಾಗಿದೆ. ಭಾರತದ ಯಾವುದೇ ಪಂದ್ಯವೂ ಕ್ರಿಕೆಟ್ ಸಂಸ್ಥೆಗಳಿಗೆ ಹಣದ ಹೊಳೆ ಹರಿಸಲಿದೆ. ಹೀಗಾಗಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಪಂದ್ಯಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸಿದ್ಧತೆ ನಡೆಸಿದೆ ಎಂದು ಅದರ ಅಧ್ಯಕ್ಷ ರೋಹಿತ್ ಪವಾರ್ ಮಾಹಿತಿ ನೀಡಿದರು.
ಮಹಾರಾಷ್ಟ್ರದಲ್ಲಿ 10 ಪಂದ್ಯಗಳು:ಈಟಿವಿ ಭಾರತ್ ಜೊತೆ ಮಾತನಾಡಿರುವ ಅವರು, "ಐದು ಪಂದ್ಯಗಳು ಸುಗಮವಾಗಿ ನಡೆಸಲು ಅಗತ್ಯ ತಯಾರಿ ಪೂರ್ಣಗೊಂಡಿದೆ. ಪಂದ್ಯಗಳು ಹಗಲಿನಲ್ಲೇ ನಡೆಯುವುದರಿಂದ ಕ್ರಿಕೆಟ್‌ಪ್ರಿಯರು ಕುಳಿತುಕೊಳ್ಳುವ ಆಸನಗಳು ಮತ್ತು ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯಗಳು ಮತ್ತು ಪಾರ್ಕಿಂಗ್ ವ್ಯವಸ್ಥೆಯಾಗಿದೆ. ಕ್ರಿಕೆಟ್ ಸಂಭ್ರಮ ಅನುಭವಿಸಲು ಮೈದಾನಕ್ಕೆ ಬರುವ ಅಭಿಮಾನಿಗಳಿಗೆ ಯಾವುದೇ ತೊಂದರೆ ಉಂಟಾಗದಿರಲು ನಮ್ಮ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ" ಎಂದು ತಿಳಿಸಿದರು.