ಹೈದರಾಬಾದ್:ಕ್ರಿಕೆಟ್ ವಿಶ್ವಕಪ್ 2023 ಪ್ರಾರಂಭವಾಗಲು ಕೇವಲ ಮೂರು ದಿನಗಳಷ್ಟೇ ಬಾಕಿ. ಭಾರತ ಆತಿಥ್ಯ ವಹಿಸುತ್ತಿರುವ ಪ್ರತಿಷ್ಠಿತ ಟೂರ್ನಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮೊದಲ ಪಂದ್ಯದಲ್ಲಿ ಸೆಣಸಲಿವೆ. ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. 46 ದಿನ 48 ಪಂದ್ಯಗಳು ನಡೆಯಲಿವೆ. ಹತ್ತು ತಂಡಗಳಲ್ಲಿ ಯುವ ಆಟಗಾರರ ಜತೆಗೆ ಅನುಭವಿ ಹಿರಿಯ ಆಟಗಾರರು ತಮ್ಮ ಛಾಪು ಮೂಡಿಸಲು ಎದುರು ನೋಡುತ್ತಿದ್ದಾರೆ.
1. ವೆಸ್ಲಿ ಬ್ಯಾರೆಸಿ: ನೆದರ್ಲ್ಯಾಂಡ್ಸ್ ಬ್ಯಾಟರ್ ವೆಸ್ಲಿ ಬ್ಯಾರೆಸಿ ಈ ವಿಶ್ವಕಪ್ ಆಡಲಿರುವ ಅತ್ಯಂತ ಹಳೆಯ ಆಟಗಾರ. ವಯಸ್ಸು 39 ವರ್ಷ, 152 ದಿನಗಳು. 2010ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ ಇವರು 45 ಏಕದಿನ ಪಂದ್ಯಗಳನ್ನಾಡಿದ್ದು, 44 ಇನ್ನಿಂಗ್ಸ್ ಮೂಲಕ 30.58 ಸರಾಸರಿಯಲ್ಲಿ 1,193 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಎಂಟು ಅರ್ಧಶತಕ ಇವರ ಖಾತೆಯಲ್ಲಿವೆ. ವೆಸ್ಲಿಯ ಸ್ಟ್ರೈಕ್ ರೇಟ್ 78.48 ಇದ್ದು 137 ರನ್ ಗರಿಷ್ಠ ಬೆಸ್ಟ್ ಸ್ಕೋರ್.
2. ರೋಲೋಫ್ ಎರಾಸ್ಮಸ್ ವ್ಯಾನ್ ಡೆರ್ ಮೆರ್ವೆ:ಇವರ ವಯಸ್ಸು 38 ವರ್ಷ, 257 ದಿನಗಳು. ನೆದರ್ಲೆಂಡ್ಸ್‌ನ ಎಡಗೈ ಸ್ಪಿನ್ನರ್ ರೋಲೋಫ್ ಎರಾಸ್ಮಸ್ ವ್ಯಾನ್ ಡೆರ್ ಮೆರ್ವೆ ಈ ಬಾರಿಯ ವಿಶ್ವಕಪ್ ಆಡುವ ಎರಡನೇ ಅತಿ ಹಿರಿಯ ಆಟಗಾರ. ಮೆರ್ವೆ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಡಿದರು. ನಂತರ ನೆದರ್ಲ್ಯಾಂಡ್ಸ್ ತಂಡದ ಪರ ಕಣಕ್ಕಿಳಿದರು. 2019ರಲ್ಲಿ ನೆದರ್ಲೆಂಡ್ಸ್‌ಗೆ ತಮ್ಮ ಚೊಚ್ಚಲ ಏಕದಿನ ಪಂದ್ಯ ಆಡಿದರು. ಇದುವರೆಗೆ 16 ಏಕದಿನ ಪಂದ್ಯಗಳನ್ನಾಡಿದ್ದು 19 ವಿಕೆಟ್ ಉರುಳಿಸಿದ್ದಾರೆ. 36.05ರ ಸರಾಸರಿಯಲ್ಲಿ 4.98ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ.
3. ಮಹಮ್ಮದ್ ನಬಿ: ಅಫ್ಘಾನಿಸ್ತಾನದ ಸ್ಟಾರ್ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರಿಗೆ 38 ವರ್ಷ 270 ದಿನಗಳು. 2015ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನಕ್ಕೆ ಪಾದಾರ್ಪಣೆ ಮಾಡಿದರು. 147 ಏಕದಿನ ಪಂದ್ಯದಲ್ಲಿ 131 ಇನ್ನಿಂಗ್ಸ್ ಆಡಿದ್ದು, 27.18ರ ಸರಾಸರಿಯಲ್ಲಿ 3,153 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 16 ಅರ್ಧ ಶತಕ ಸಿಡಿಸಿದ್ದಾರೆ. ಬೌಲಿಂಗ್ನಲ್ಲೂ ತಮ್ಮ ದೇಶಕ್ಕೆ ಕೊಡುಗೆ ನೀಡಿರುವ ಅವರು 154 ವಿಕೆಟ್ ಪಡೆದಿದ್ದಾರೆ. 30 ರನ್ ಕೊಟ್ಟು 4 ವಿಕೆಟ್ ಕಬಳಿಸಿರುವುದು ಅತ್ಯುತ್ತಮ ಪ್ರದರ್ಶನ.