ಹೈದರಾಬಾದ್: ನಡೆಯುತ್ತಿರುವ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಪಡೆ ಉತ್ತಮ ಪ್ರದರ್ಶನ ನೀಡುತ್ತಿದ್ದು, 6 ಪಂದ್ಯದಲ್ಲಿ ಎಲ್ಲವನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ಮೂರು ಪಂದ್ಯಗಳು ಭಾರತಕ್ಕೆ ಬಾಕಿ ಇದ್ದು, ಅವುಗಳಲ್ಲಿ ಎರಡರಲ್ಲಿ ಗೆದ್ದಲ್ಲಿ ನಂ.1 ತಂಡವಾಗಿಯೇ ಸೆಮೀಸ್ ಪ್ರವೇಶ ಪಡೆಯಲಿದೆ.
ಆದರೆ, ಟೀಮ್ ಇಂಡಿಯಾಕ್ಕೆ ಮುಂದಿನ ಎರಡು ಪಂದ್ಯಗಳಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಲಭ್ಯ ಇರುವುದಿಲ್ಲ. ಅಕ್ಟೋಬರ್ 19ರಂದು ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಅವರದ್ದೇ ಬೌಲಿಂಗ್ನಲ್ಲಿ ಕ್ಷೇತ್ರರಕ್ಷಣೆಗೆ ಪ್ರಯತ್ನಿಸಿದಾಗ ಪಾದದ ಗಾಯಕ್ಕೆ ತುತ್ತಾದರು. ಅವರ ಓವರ್ನ ಬಾಕಿ ಮೂರು ಬಾಲ್ಗಳನ್ನು ವಿರಾಟ್ ಕೊಹ್ಲಿ ಪೂರೈಸಿದ್ದರು. ಬಾಂಗ್ಲಾ ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಗೆ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಿಕೊಡಲಾಗಿತ್ತು.
ನಂತರ ಹಾರ್ದಿಕ್ ಹೊರತಾಗಿ ಅ.22 ರಂದು ನ್ಯೂಜಿಲೆಂಡ್ ಮತ್ತು ಅ.29 ರಂದು ಇಂಗ್ಲೆಂಡ್ ವಿರುದ್ಧ ಭಾರತ ಪಂದ್ಯಗಳನ್ನಾಡಿತ್ತು. ಈ ಪಂದ್ಯಗಳಿಗೂ ಮುನ್ನ ಬಿಸಿಸಿಐ ಹಾರ್ದಿಕ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡದ್ದರು. ನಾಳೆ ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ ವಾಂಖೆಡೆಯಲ್ಲಿ ನಡೆಯುವ ಪಂದ್ಯದ ವೇಳೆಗೆ ಹಾರ್ದಿಕ್ ತಂಡಕ್ಕೆ ಮರಳುವ ನಿರೀಕ್ಷೆ ಇತ್ತು. ಆದರೆ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿರದ ಕಾರಣ ನ.2 ರಂದು ಶ್ರೀಲಂಕಾ ಮತ್ತು ನ. 5 ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಆಡುತ್ತಿಲ್ಲ.