ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಿನ್ನೆ (ಸೆಪ್ಟೆಂಬರ್ 28) ವಿಶ್ವಕಪ್ನಲ್ಲಿ ಭಾಗವಹಿಸುವ 15 ಜನ ಸದಸ್ಯರ ಅಂತಿಮ ಪಟ್ಟಿಯನ್ನು ಪ್ರಕಟಿಸಲು ಕೊನೆಯ ದಿನವಾಗಿದೆ. ಕ್ರಿಕೆಟ್ ವಿಶ್ವಕಪ್ನಲ್ಲಿ(Cricket World Cup 2023) ಭಾಗವಹಿಸುವ 10 ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಆತಿಥೇಯ ರಾಷ್ಟ್ರವಾದ ಭಾರತ ಈ ಹಿಂದೆ ಪ್ರಕಟಿಸಿದ್ದ ಕರಡು ಪಟ್ಟಿಗೂ, ಅಂತಿಮ ಸದಸ್ಯರ ಪಟ್ಟಿಗೂ ಒಂದು ಪ್ರಮುಖ ಬದಲಾವಣೆಯನ್ನು ಮಾಡಿಕೊಂಡಿದೆ.
ಅದೇನೆಂದೆ 37ರ ಹರೆಯದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಬದಲಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಸೆಪ್ಟೆಂಬರ್ 5 ರಂದು ಪ್ರಕಟವಾದ ವಿಶ್ವಕಪ್ ತಂಡದಲ್ಲಿ ಆಲ್‌ರೌಂಡರ್ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಹೆಸರಿಸಲಾಗಿತ್ತು. ಆದರೆ, ಅಕ್ಷರ್ ಪಟೇಲ್ ಏಷ್ಯಾಕಪ್ನ ಸೂಪರ್ 4ನ ಕೊನೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಅವರ ಬದಲಾಗಿ ಅಶ್ವಿನ್ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಸ್ತುತ ಇರುವ ಮಾಹಿತಿಯ ಪ್ರಕಾರ ಅಕ್ಷರ್ ಪಟೇಲ್ ಅವರು ಚೇತರಿಸಿಕೊಳ್ಳಲು ಕನಿಷ್ಠ ನಾಲ್ಕರಿಂದ ಐದು ವಾರಗಳನ್ನು ತೆಗೆದುಕೊಳ್ಳಲಿದ್ದಾರೆ.
"ಅಕ್ಷರ್ ನಂತರ ಯಾವುದೇ ಆಯ್ಕೆ ಇರಲಿಲ್ಲ. ರವಿಚಂದ್ರನ್ ಅಶ್ವಿನ್ ತಂಡಗಳನ್ನು ಆಡಿದ ಅಪಾರ ಅನುಭವ ಹೊಂದಿರುವ ಆಟಗಾರ. ರಾಷ್ಟ್ರೀಯ ತಂಡಕ್ಕೆ ಅವರ ಲಭ್ಯತೆ ತಿಳಿಯಲು ಅಶ್ವಿನ್ ಅವರನ್ನು ತಂಡದ ನಾಯಕ ರೋಹಿತ್ ಶರ್ಮಾ ಕರೆದರು. ಆದರೆ, ಅಶ್ವಿನ್ ಮ್ಯಾಚ್ ಫಿಟ್ ಆಗಲು ಕೆಲವು ದಿನಗಳ ಕಾಲಾವಕಾಶ ಕೇಳಿದರು. ನಂತರ ಅಶ್ವಿನ್ ಅವರನ್ನು ಅಂತಿಮ 15 ಜನ ಸದಸ್ಯರ ತಂಡದಲ್ಲಿ ಸೇರಿಸಲಾಯಿತು. ನಾಲ್ವರು ವೇಗಿಗಳ ಹೊರತಾಗಿ ಒಬ್ಬ ಆಫ್ - ಸ್ಪಿನ್ನರ್ ಮತ್ತು ಎಡಗೈ ಸ್ಪಿನ್ನರ್‌ನೊಂದಿಗೆ ತಂಡವು ಈಗ ಸಂಪೂರ್ಣವಾಗಿದೆ" ಎಂದು ಬಿಸಿಸಿಐನ ಉನ್ನತ ಮೂಲವು ಈಟಿವಿ ಭಾರತಕ್ಕೆ ತಿಳಿಸಿದೆ.
ಏಷ್ಯಾಕಪ್ ವೇಳೆ ಅಶ್ವಿನ್ ಅವರನ್ನು ಸಂಪರ್ಕಿಸಿರುವುದಾಗಿ ರೋಹಿತ್ ಶರ್ಮಾ ಹೇಳಿಕೊಂಡಿದ್ದರು. ಅದರಂರತೆ ಅಶ್ವಿನ್ ಪ್ರಾದೇಶಿಕ ಕ್ರೀಡೆಯನ್ನು ತೊರೆದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದು ಅಭ್ಯಾಸ ಆರಂಭಿಸಿದ್ದರು. ಏಷ್ಯಾಕಪ್ ಕೊನೆ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಏಕೆಂದರೆ ಸುಂದರ್ ಏಷ್ಯನ್ ಗೇಮ್ಸ್ಗಾಗಿ ತಯಾರಿ ನಡೆಸುತ್ತಿದ್ದರಿಂದ ನೇರವಾಗಿ ಪಂದ್ಯ ಆಡಲು ಫಿಟ್ ಆಗಿದ್ದರು. ಏಷ್ಯಾಕಪ್ ನಂತರ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಈ ಮೂಲಕ ಅವರು 21 ತಿಂಗಳ ನಂತರ ಭಾರತದ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು. ಕೊನೆಯದಾಗಿ ವಿಶ್ವಕಪ್ ತಂಡದಲ್ಲೂ ಅನುಭವಿ ಅಶ್ವಿನ್ ಸ್ಥಾನ ಪಡೆದುಕೊಂಡಿದ್ದಾರೆ.