ನವದೆಹಲಿ: ನೆದರ್ಲೆಂಡ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಮ್ಯಾಕ್ಸ್ವೆಲ್, ವಿಶ್ವಕಪ್‌ನಲ್ಲಿ ಕಡಿಮೆ ಎಸೆತಗಳಲ್ಲಿ ವೇಗದ ಶತಕ ಗಳಿಸಿದ ದಾಖಲೆ ಮಾಡಿದ್ದಾರೆ. ಕೇವಲ 40 ಎಸೆತ ಎದುರಿಸಿದ ಮ್ಯಾಕ್ಸ್ವೆಲ್ ಶತಕ ಸಿಡಿಸಿ ಸಂಭ್ರಮಿಸಿದರು. ಇದು ಏಕದಿನ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕವೆಂದು ದಾಖಲಾಗಿದೆ.
ಇದಕ್ಕೂ ಮೊದಲು ಇದೇ ವಿಶ್ವಕಪ್‌ನಲ್ಲಿ ಆ್ಯಡಮ್ ಮಾರ್ಕ್ರಾಮ್ ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ಗಳಿಸಿದ್ದರು. ಈ ದಾಖಲೆಯನ್ನೀಗ ಮ್ಯಾಕ್ಸಿ ಮುರಿದಿದ್ದಾರೆ. ಅರ್ಧಶತಕದಿಂದ ಶತಕಕ್ಕೆ ಮ್ಯಾಕ್ಸ್ವೆಲ್ ಕೇವಲ 2.2 ಓವರ್ ಅಂದರೆ 14 ಎಸೆತಗಳನ್ನಷ್ಟೇ ಎದುರಿಸಿದ್ದರು.
39.9ನೇ ಓವರ್ಗೆ ಜೋಶ್ ಇಂಗ್ಲಿಸ್ ವಿಕೆಟ್ ಉರುಳಿದಾಗ ತಂಡದ ಮೊತ್ತ 267 ರನ್ ಆಗಿತ್ತು. ಈ ವೇಳೆ ಮೈದಾನಕ್ಕಿಳಿದ ಮ್ಯಾಕ್ಸ್ವೆಲ್ ಅಬ್ಬರಿಸಲು ಆರಂಭಿಸಿದರು. ಇದರ ನಡುವೆ ಕ್ಯಾಮೆರಾನ್ ಗ್ರೀನ್ ವಿಕೆಟ್ ಕಳೆದುಕೊಂಡರು. ನಂತರ 200ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಮ್ಯಾಕ್ಸಿ ರನ್ ವೇಗವನ್ನು ಹೆಚ್ಚಿಸುತ್ತಲೇ ಸಾಗಿದರು. 27 ಎಸೆತ ಎದುರಿಸಿ ಅರ್ಧಶತಕ ಗಳಿಸಿದರು. ಇದಾದ ನಂತರ ಮ್ಯಾಕ್ಸ್ವೆಲ್ ಮ್ಯಾಕ್ಸಿಮಮ್ ಶಾಟ್ಗಳನ್ನೇ ಆಡಿದರು. 46.2 ಓವರ್ಗೆ ಅರ್ಧಶತಕ ಪೂರೈಸಿದ ಅವರು 48.5ನೇ ಓವರ್ಗೆ ಶತಕ ದಾಖಲಿಸಿ ಸಂಭ್ರಮಿಸಿದರು.
ವಿಶ್ವಕಪ್‌ನಲ್ಲಿ ವೇಗದ ಶತಕ:40 ಎಸೆತಗಳಲ್ಲಿ 100 ರನ್ ತಲುಪಿ ಮ್ಯಾಕ್ಸ್ವೆಲ್ ಏಕದಿನ ಕ್ರಿಕೆಟ್ ವಿಶ್ವದಾಖಲೆ ಮಾಡಿದರು. ಇದೇ ವಿಶ್ವಕಪ್ ಮತ್ತು ಇದೇ ಮೈದಾನದಲ್ಲಿ ಅಕ್ಟೋಬರ್ 7ರಂದು ಆ್ಯಡಮ್ ಮಾರ್ಕ್ರಾಮ್ ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಮ್ಯಾಕ್ಸ್ವೆಲ್ 18 ದಿನದಲ್ಲಿ ಆ ದಾಖಲೆ ಮುರಿದಿದ್ದಾರೆ. ಐರ್ಲೆಂಡ್ನ ಕೆವಿನ್ ಒ'ಬ್ರೇನ್ 2011ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 50 ಎಸೆತಗಳಲ್ಲಿ ಶತಕ ಮಾಡಿದ್ದರು. 2015 ವಿಶ್ವಕಪ್‌ನಲ್ಲಿ ಮ್ಯಾಕ್ಸ್ವೆಲ್ 51 ಬಾಲ್ ಮತ್ತು ಎಬಿ ಡಿ ವಿಲಿಯರ್ಸ್ 52 ಎಸೆತಗಳಲ್ಲಿ ಗಳಿಸಿದ ಶತಕಗಳು ದಾಖಲೆ ಪಟ್ಟಿಯಲ್ಲಿವೆ.
ಏಕದಿನ ಕ್ರಿಕೆಟ್ನ ನಾಲ್ಕನೇ ವೇಗದ ಶತಕ:ಒಟ್ಟಾರೆ ಏಕದಿನ ಕ್ರಿಕೆಟ್ನಲ್ಲಿ ಮ್ಯಾಕ್ಸ್ವೆಲ್ (40 ಎಸೆತ) ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ ಅವರ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. ಡಿ ವಿಲಿಯರ್ಸ್ 2015ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಕೇವಲ 31 ಎಸೆತಗಳಲ್ಲಿ ಶತಕ ಮಾಡಿದ್ದು ದಾಖಲೆಯಾಗಿದೆ. ಕೋರಿ ಆ್ಯಂಡರ್ಸನ್ 36 ಎಸೆತ, ಶಾಹಿದ್ ಆಫ್ರಿದಿ 37 ಎಸೆತಗಳಲ್ಲಿ ಶತಕ ಮಾಡಿದ್ದಾರೆ.
ಪಿಂಚ್, ವ್ಯಾಟ್ಸನ್ ದಾಖಲೆ ಮುರಿದ ಮ್ಯಾಕ್ಸಿ: ಆಸ್ಟ್ರೇಲಿಯಾ ತಂಡಕ್ಕೆ ಅತಿ ಹೆಚ್ಚು ಸಿಕ್ಸ್ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಮ್ಯಾಕ್ಸ್ವೆಲ್ ಆ್ಯರೊನ್ ಪಿಂಚ್ (129) ಮತ್ತು ಶೇನ್ ವ್ಯಾಟ್ಸನ್ (131) ದಾಖಲೆ ಮುರಿದಿದ್ದಾರೆ. ಒಟ್ಟಾರೆ ಈವರೆಗ ಗ್ಲೆನ್ 138 ದೊಡ್ಡ ಹೊಡೆತ ದಾಖಲಿಸಿದ್ದು, ಈ ಸಿಕ್ಸ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಮ್ಯಾಕ್ಸಿಗಿಂತ ಹೆಚ್ಚು ದಿಗ್ಗಜರಾದ ರಿಕ್ಕಿ ಪಾಂಟಿಂಗ್ (159) ಮತ್ತು ಆ್ಯಡಮ್ ಗಿಲ್ಕ್ರಿಸ್ಟ್ (148) ಸಿಕ್ಸ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಇದೇ ರೀತಿ ಫಾರ್ಮ್ ಮುಂದುವರೆಸಿದರೆ ಮ್ಯಾಕ್ಸ್ವೆಲ್ ಅಗ್ರಸ್ಥಾನಕ್ಕೇರಲಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ವಾರ್ನರ್, ಮ್ಯಾಕ್ಸ್ವೆಲ್ ಅಬ್ಬರದ ಶತಕ: ಕ್ರಿಕೆಟ್ ಶಿಶು ನೆದರ್ಲೆಂಡ್ಸ್ಗೆ 400 ರನ್ ಬೃಹತ್ ಗುರಿ