ಹೈದರಾಬಾದ್: ವಿಶ್ವಕಪ್ ಮಹಾ ಕ್ರಿಕೆಟ್ ಹಬ್ಬಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ. ಅಭಿಮಾನಿಗಳಲ್ಲಿ ದಿನ ದಿನಕ್ಕೂ ಕುತೂಹಲ ಹೆಚ್ಚುತ್ತಿದೆ. 10 ತಂಡಗಳು ರನ್ ಮತ್ತು ವಿಕೆಟ್ ಬೇಟೆಗೆ ಸಜ್ಜಾಗುತ್ತಿವೆ. ಹೀಗಿರುವಾಗ 1987, 1999, 2003, 2007 ಮತ್ತು 2015 ಸೇರಿದಂತೆ ಒಟ್ಟು ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಕದನದಲ್ಲಿ ಬಲಿಷ್ಠ ಕ್ರಿಕೆಟ್ ರಾಷ್ಟ್ರ ಎನಿಸಿಕೊಂಡಿದೆ. ಕಾಂಗರೂ ಪಡೆ ಆರನೇ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಭಾರತಕ್ಕೆ ಆಗಮಿಸಿದೆ. ಈ ವರ್ಷ ನಡೆದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ಹುರುಪು ತಂಡದಲ್ಲಿದೆ. ಏಕದಿನ ವಿಶ್ವಕಪ್ ಅನ್ನೂ ಗೆದ್ದು ಒಂದೇ ವರ್ಷ ಎರಡು ಐಸಿಸಿ ಟ್ರೋಫಿ ಗೆಲ್ಲುವ ಲೆಕ್ಕಾಚಾರ ಕಮಿನ್ಸ್ ಪಡೆಯದ್ದು.
ಅಸಾಧಾರಣ ಬೌಲಿಂಗ್ ದಾಳಿ: ಆಸ್ಟ್ರೇಲಿಯಾವು ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್‌ವುಡ್‌ರಂಥ ದಿಗ್ಗಜ ಬೌಲರ್‌ಗಳನ್ನು ಒಳಗೊಂಡಿದೆ. ಈ ತ್ರಿವಳಿ ವೇಗಿಗಳು ತಮ್ಮ ರೆಕಾರ್ಡ್ಗಳಿಂದ ಎಷ್ಟು ಮಾರಕ ಎಂಬುದನ್ನು ಸಾಬೀತು ಮಾಡಿದವರು. ಭಾರತದ ಮಧ್ಯಮ ವೇಗದ ಪಿಚ್‌ಗಳಲ್ಲೂ ಗಂಟೆಗೆ 140 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಡುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ. ಲೆಗ್ ಸ್ಪಿನ್ನರ್ ಆ್ಯಡಮ್ ಝಂಪಾ ಭಾರತೀಯ ಪಿಚ್‌ಗಳಲ್ಲಿ ಬೌಲಿಂಗ್ ಮಾಡಿದ ಅನುಭವಿ.
ಜನವರಿ 2023ರಿಂದ ಮಿಚೆಲ್ ಸ್ಟಾರ್ಕ್ ಭಾರತದ ನೆಲದಲ್ಲಿ ಕೇವಲ ನಾಲ್ಕು ಏಕದಿನ ಆಡಿದ್ದು, 24.66 ಸರಾಸರಿಯಲ್ಲಿ ಒಂಬತ್ತು ವಿಕೆಟ್ ಪಡೆದಿದ್ದಾರೆ. ಹ್ಯಾಜಲ್‌ವುಡ್ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದರು. ಆದರೆ ಭಾರತದ ಪಿಚ್ಗಳ ಅರಿವು ಅವರಿಗಿದೆ. ಇಲ್ಲಿಯವರೆಗೆ ಹ್ಯಾಜಲ್‌ವುಡ್ 74 ಏಕದಿನಗಳಲ್ಲಿ 26.4 ರ ಸರಾಸರಿಯಲ್ಲಿ 4.70ರ ಎಕಾನಮಿಯೊಂದಿಗೆ 116 ವಿಕೆಟ್ಗಳನ್ನು ಪಡೆದಿದ್ದಾರೆ. ಕಮಿನ್ಸ್ 77 ಒನ್ ಡೇ ಮ್ಯಾಚ್ಗಳಿಂದ 126 ವಿಕೆಟ್ ಪಡೆದಿದ್ದಾರೆ. ಭಾರತೀಯ ಸ್ಪಿನ್ ವಿಕೆಟ್ಗಳಲ್ಲಿ ಆ್ಯಡಮ್ ಝಂಪಾ ಪಾತ್ರ ತಂಡದಲ್ಲಿ ಪ್ರಮುಖವಾಗಿರುತ್ತದೆ. ಭಾರತದ ಪಿಚ್‌ಗಳಲ್ಲಿ 16 ಏಕದಿನ ಪಂದ್ಯದಲ್ಲಿ 30.77 ಸರಾಸರಿಯಲ್ಲಿ 27 ವಿಕೆಟ್ ಉರುಳಿಸಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಲೈನಪ್: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರಂತಹ ಪವರ್ ಹಿಟ್ಟರ್‌ಗಳು ತಂಡ ಬ್ಯಾಟಿಂಗ್ ಬಲ. ಸ್ಟೀವ್ ಸ್ಮಿತ್ ಅವರ ಅನುಭವ ಮತ್ತು ಉದಯೋನ್ಮುಖ ಪ್ರತಿಭೆ ಮಾರ್ನಸ್ ಲ್ಯಾಬುಶೇನ್ ತಂಡಕ್ಕೆ ಆಧಾರವಾಗಲಿದ್ದಾರೆ. ಅಗ್ರ ಕ್ರಮಾಂಕ ಕುಸಿದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಒದಗಿಸುವ ಸಾಮರ್ಥ್ಯ ತಂಡಕ್ಕಿದೆ. ಈ ವರ್ಷ ಡೇವಿಡ್ ವಾರ್ನರ್ ಭಾರತದ ವಿರುದ್ಧ ಸತತ ಮೂರು ಅರ್ಧಶತಕಗಳು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಶತಕಗಳೊಂದಿಗೆ 9 ಏಕದಿನದಲ್ಲಿ 390 ರನ್‌ಗಳನ್ನು ಗಳಿಸಿದ್ದಾರೆ. ಒನ್ಡೇ ಕ್ರಿಕೆಟ್ ಮಾದರಿಯಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಇವರು.