ಬೆಂಗಳೂರು:ಪ್ರಸ್ತುತ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ತಾನಾಡಿರುವ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಸೋತು ನಿರಾಶಾದಾಯಕ ಪ್ರದರ್ಶನ ನೀಡಿದೆ. ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮಾತ್ರ ಗೆದ್ದಿರುವ ಕಾಂಗರೂ ಪಡೆ ಬೆಂಗಳೂರಿನಲ್ಲಿ ಶುಕ್ರವಾರ ನಡೆಯುವ ಪಾಕಿಸ್ತಾನದ ವಿರುದ್ಧದ ತನ್ನ ನಾಲ್ಕನೇ ಪಂದ್ಯಕ್ಕೆ ಸಜ್ಜಾಗಿದೆ.
ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, ''ನಾಳಿನ ಪಂದ್ಯಕ್ಕೆ ತಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ'' ಎಂದರು. ಇದೇ ವೇಳೆ, ಭಾರತ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ನೀಡಿದ ಹೇಳಿಕೆಗೆ ಕಮಿನ್ಸ್ ಶಾಂತವಾಗಿಯೇ ಉತ್ತರಿಸಿದರು.
ಆಸ್ಟ್ರೇಲಿಯಾದ ಸ್ಥಳೀಯ ರೇಡಿಯೋ ಶೋನಲ್ಲಿ ಮಾತನಾಡಿದ್ದ ಕ್ಲಾರ್ಕ್, ''ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಡುವ ಹನ್ನೊಂದರ ಬಳಗದಿಂದ ಕಮಿನ್ಸ್ ಹೊರಗುಳಿಯಬೇಕು'' ಎಂದಿದ್ದರು. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಾಲಿ ನಾಯಕ, ''ಕ್ಲಾರ್ಕ್ ಹೇಳಿಕೆ ಆಶ್ಚರ್ಯ ತರಿಸಿತು. ಆದರೆ, ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ'' ಎನ್ನುವ ಮೂಲಕ ತಿರುಗೇಟು ಕೊಟ್ಟರು.