ನವದೆಹಲಿ:ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಮತ್ತೊಮ್ಮೆ ಬದಲಾವಣೆ ಆಗುವ ಸಾಧ್ಯತೆ ಇದೆ. ಹೈದಾರಬಾದ್ ಮೈದಾನದಲ್ಲಿ ಅಕ್ಟೋಬರ್ 9 ಹಾಗೂ 10 ರಂದು ವಿಶ್ವಕಪ್ ಪಂದ್ಯಗಳು ಸತತವಾಗಿ ನಡೆಯಲಿದ್ದು, ಇದನ್ನು ಬದಲಿಸಿ ಒಂದು ದಿನದ ಬ್ರೇಕ್ ನೀಡಬೇಕೆಂದು ಬಿಸಿಸಿಐಗೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಪತ್ರ ಬರೆದಿದೆ. ಈ ಮೂಲಕ ವಿಶ್ವಕಪ್ ವೇಳಾಪಟ್ಟಿಯಲ್ಲಿ ಮತ್ತೊಂದು ಬದಲಾವಣೆ ಆಗುವ ಸೂಚನೆ ಸಿಕ್ಕಿದೆ.
ವಿಶ್ವಕಪ್ ವೇಳಾಪಟ್ಟಿ ಜೂನ್‌ನಲ್ಲಿ ತಡವಾಗಿ ಪ್ರಕಟವಾಗಿತ್ತು. ನಂತರ, ಬಿಸಿಸಿಐ ಮತ್ತು ಐಸಿಸಿ ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಸೇರಿದಂತೆ ಒಟ್ಟು 9 ಪಂದ್ಯಗಳನ್ನು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿತ್ತು. ಇದರಿಂದಾಗಿ ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಇಂಡೋ-ಪಾಕ್ ಪಂದ್ಯವು ಒಂದು ದಿನ ಮೊದಲು ಅಂದರೆ ಅ.14ಕ್ಕೆ ನಿಗದಿಪಡಿಸಲಾಗಿತ್ತು. ಪರಿಣಾಮವಾಗಿ ಹೈದರಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಾಕಿಸ್ತಾನದ ಪಂದ್ಯವನ್ನು ಅಕ್ಟೋಬರ್ 12 ರಿಂದ ಅಕ್ಟೋಬರ್ 10 ಕ್ಕೆ ಸ್ಥಳಾಂತರಿಸಲಾಯಿತು. ಅಲ್ಲದೆ ಅಕ್ಟೋಬರ್ 9 ರಂದು ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವೆ ನಡೆಯುವ ಪಂದ್ಯಕ್ಕೂ ಹೈದಾರಬಾದ್ ಮೈದಾನ ಆತಿಥ್ಯ ವಹಿಸುತ್ತಿದೆ.
ಈಗ, ಹೈದರಾಬಾದ್ ಪೊಲೀಸರು ಬ್ಯಾಕ್ ಟು ಬ್ಯಾಕ್ ಪಂದ್ಯಗಳಿಗೆ ಭದ್ರತೆಯನ್ನು ಒದಗಿಸಬೇಕಿರುವುದರಿಂದ ಮತ್ತೊಮ್ಮೆ ವೇಳಾಪಟ್ಟಿ ಬದಲಾವಣೆಗೆ ಮನವಿ ಮಾಡಲಾಗಿದೆ. ಇದು ಖಚಿತವಾಗಿ ಬದಲಾಗಲಿದೆ ಎಂದು ನಾನು ಹೇಳಲಾರೆ ಆದರೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳು ಸೂಕ್ತವಲ್ಲ. ನನ್ನ ಪ್ರಕಾರ ಬಿಸಿಸಿಐ ಮರುಪರಿಶೀಲನೆ ಮಾಡಿದರೆ ಉತ್ತಮ. ನಾವು ಭದ್ರತಾ ಏಜೆನ್ಸಿಗಳೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಎರಡು ವಿಶ್ವಕಪ್ ಪಂದ್ಯಗಳ ನಡುವೆ ಯಾರಾದರೂ ಒಂದು ದಿನ ಅಂತರವನ್ನು ಬಯಸುತ್ತಾರೆ. ಅದು ಸಾಧ್ಯವೋ ಇಲ್ಲವೋ ಎಂದು ನೋಡಲು ನಾವು ಇನ್ನೂ ಭದ್ರತಾ ಏಜೆನ್ಸಿಗಳೊಂದಿಗೆ ತೊಡಗಿಸಿಕೊಂಡಿದ್ದೇವೆ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ತಿಳಿಸಿದ್ದಾರೆ.