ನವದೆಹಲಿ:ವಿಶ್ವಕಪ್ನಲ್ಲಿ ಇಲ್ಲಿಯವರೆಗೆ ಬ್ಲ್ಯೂ ಜರ್ಸಿ ತೊಟ್ಟು ಕಣಕ್ಕಿಳಿದಿದ್ದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆರೆಂಜ್(ಕಿತ್ತಳೆ ಬಣ್ಣ) ಜರ್ಸಿ ತೊಟ್ಟು ಮೈದಾನಕ್ಕಿಳಿಯುವ ಸಾಧ್ಯತೆ ಇದೆ.
ಇಂಗ್ಲೆಂಡ್ ಮತ್ತು ಭಾರತ ತಂಡದ ಜರ್ಸಿಗಳು ಒಂದೇ ಬಣ್ಣದಲ್ಲಿದ್ದು, ಉಭಯ ತಂಡಗಳು ಮುಖಾಮುಖಿಯಾದಾಗ ನೋಡುಗರಿಗೆ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಜರ್ಸಿ ಬಣ್ಣ ಬದಲಾಯಿಸುವ ಕುರಿತು ಐಸಿಸಿ, ಬಿಸಿಸಿಐಗೆ ತಿಳಿಸಿತ್ತು. ಹೀಗಾಗಿ ನೀಲಿ ಮತ್ತು ಕೇಸರಿ ಮಿಶ್ರಿತ ಬಣ್ಣದ ನೂತನ ಜೆರ್ಸಿಯಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯುವ ಸಾಧ್ಯತೆ ಇದೆ.
ಟಿ - 20 ಆರಂಭದಲ್ಲಿ ಟೀಂ ಇಂಡಿಯಾ ಆರೆಂಜ್ ಕಲರ್ ಜೆರ್ಸಿಯಲ್ಲೇ ಕಣಕ್ಕಿಳಿಯುತ್ತಿತ್ತು. ಹೀಗಾಗಿ ಹಳೆಯ ಜೆರ್ಸಿಯನ್ನೇ ಬಿಸಿಸಿಐ ಆಯ್ಕೆ ಮಾಡಿಕೊಂಡಿದೆ ಎಂಬುದನ್ನು ಐಸಿಸಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದೆ.
ನೂತನ ಜೆರ್ಸಿಗೆ ಕ್ಯಾತೆ ತೆಗೆದಿದ್ದ ಕಾಂಗ್ರೆಸ್ ಮತ್ತು ಸಮಜವಾದಿ ಪಕ್ಷ:
ಇತ್ತ ಟೀಂ ಇಂಡಿಯಾ ಕೇಸರಿ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಎಂದ ಸುದ್ದಿ ಕಾಂಗ್ರೆಸ್ ಮತ್ತು ಎಸ್ಪಿ ಪಕ್ಷದ ಕಣ್ಣು ಕೆಂಪಗಾಗಿಸಿತ್ತು. ಇದರ ಹಿಂದೆ ನರೇಂದ್ರ ಮೋದಿ ಕೈವಾಡವಿದೆ. ಕೆಸರಿಮಯವಾಗಿ ಪರಿವರ್ತಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಬಿಸಿಸಿಐ ಕೂಡ ಆಡಳಿತ ಪಕ್ಷದ ಪರವಾಗಿ ಕೇಸರಿ ಬಣ್ಣ ಆಯ್ಕೆ ಮಾಡಿದೆ ಎಂದು ಆರೋಪಿಸಿದ್ದವು.
ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಐಸಿಸಿ, ಬಣ್ಣ ಆಯ್ಕೆ ವಿಚಾರವನ್ನ ಬಿಸಿಸಿಐಗೆ ನೀಡಲಾಗಿತ್ತು. ಇದೇ ಕೇಸರಿ ಬಣ್ಣವನ್ನ ಟೀಂ ಇಂಡಿಯಾ ಟಿ-20 ಸರಣಿಯಲ್ಲಿ ಬಳಸಿತ್ತು, ಆದ್ದರಿಂದ ಕೇಸರಿ ಬಣ್ಣ ಆಯ್ಕೆ ಮಾಡಲಾಗಿದೆ. ಯಾವ ಬಣ್ಣ ಸರಿ ಹೊಂದುತ್ತದೆ ಎಂದು ಬಿಸಿಸಿಐ ತಿಳಿಸುತ್ತದೆಯೋ ಅದನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಇದೇ ಕೇಸರಿ ಬಣ್ಣದ ಜೆರ್ಸಿಯನ್ನ ಇಂಗ್ಲೆಂಡ್ ತಂಡ ಕೂಡ ಬಳಸಿತ್ತು ಎಂದು ಐಸಿಸಿ ತಿಳಿಸಿದೆ.