ಕರ್ನಾಟಕ

karnataka

ETV Bharat / sports

'ಕ್ರಿಕೆಟ್ ಕಾಶಿ'ಯಲ್ಲಿ ಫೈನಲ್ ಮ್ಯಾಚ್‌: ಪ್ರತಿಷ್ಟಿತ ಪ್ರಶಸ್ತಿಗೆ ಮುತ್ತಿಡುವವರಾರು? - ವಿಶ್ವಕಪ್

ಟೂರ್ನಿಯ ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಸೆಮೀಸ್​ನಲ್ಲಿ ಅಭಿಯಾನ ಅಂತ್ಯಗೊಳಿಸಿದ ಪರಿಣಾಮ ಫೈನಲ್ ಪ್ರವೇಶಿಸಿರುವ ಉಭಯ ತಂಡಗಳು ಚೊಚ್ಚಲ ಕಪ್​ ನಿರೀಕ್ಷೆಯಲ್ಲಿವೆ. ವಿಶ್ವಕಪ್ ಫೈನಲ್​ನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಚಾಂಪಿಯನ್​

By

Published : Jul 14, 2019, 12:20 PM IST

ಲಾರ್ಡ್ಸ್: ಒಂದಷ್ಟು ಅಚ್ಚರಿಯ ಫಲಿತಾಂಶದೊಂದಿಗೆ ವಿಶ್ವಕಪ್​ ಟೂರ್ನಿ ಉಪಾಂತ್ಯ ತಲುಪಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ.

ಟೂರ್ನಿಯ ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಸೆಮೀಸ್​ನಲ್ಲಿ ಅಭಿಯಾನ ಅಂತ್ಯಗೊಳಿಸಿದ ಪರಿಣಾಮ ಫೈನಲ್ ಪ್ರವೇಶಿಸಿರುವ ಉಭಯ ತಂಡಗಳು ಚೊಚ್ಚಲ ಕಪ್​ ನಿರೀಕ್ಷೆಯಲ್ಲಿವೆ. ವಿಶ್ವಕಪ್ ಫೈನಲ್​ನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಕ್ರಿಕೆಟ್​ ಜನಕರ ಪಾಲಿಗೆ ವಿಶ್ವಕಪ್​​ ಎಂಬುದು​ ಮರೀಚಿಕೆ... ಹಿಂದಿನ 3 ಫೈನಲ್​ನಲ್ಲಿ ಪ್ರತ್ಯೇಕ ತಂಡಗಳಿಂದ ಸೋಲು!

ನೂತನ ಚಾಂಪಿಯನ್​​:

ಕಳೆದ ಕೆಲ ಆವೃತ್ತಿಗಳಿಗಿಂತ ಈ ಬಾರಿಯ ವಿಶ್ವಕಪ್ ಫೈನಲ್ ಕೊಂಚ ಭಿನ್ನ. ಇದಕ್ಕೆ ಕಾರಣ ಫೈನಲ್ ಪ್ರವೇಶಿಸಿರುವ ಎರಡೂ ತಂಡಗಳು ಮೊದಲ ಬಾರಿಗೆ ಕಪ್​ ಗೆಲ್ಲುವ ಕನಸು ಕಾಣುತ್ತಿವೆ. 23 ವರ್ಷಗಳ ಬಳಿಕ ವಿಶ್ವಕಪ್​ ಸಮರದಲ್ಲಿ ನೂತನ ಚಾಂಪಿಯನ್ ಹೊರಹೊಮ್ಮಲಿದೆ. 1996ರಲ್ಲಿ ಶ್ರೀಲಂಕಾ ಚೊಚ್ಚಲ ಬಾರಿಗೆ ಚಾಂಪಿಯನ್ ಆದ ಬಳಿಕ ಆಸ್ಟ್ರೇಲಿಯಾ 4 ಹಾಗೂ ಭಾರತ 1 ಬಾರಿ ಟ್ರೋಫಿಗೆ ಮುತ್ತಿಕ್ಕಿತ್ತು.

ವಿಶ್ವಕಪ್ ಜೊತೆಗೆ ಉಭಯ ತಂಡದ ನಾಯಕರು

ಪಂದ್ಯ ಟೈ ಆದಲ್ಲಿ?

ಫೈನಲ್​ಗೆ ಎಂಟ್ರಿ ನೀಡಿರುವ ಆಂಗ್ಲರು ಹಾಗೂ ಕಿವೀಸ್ ನಡುವೆ ರೋಚಕ ಹಣಾಹಣಿ ನಡೆಯುವುದಂತೂ ನಿಶ್ಚಿತ. ಹೀಗಾಗಿ ಇಂದಿನ ನಿರ್ಣಾಯಕ ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ಮೂಲಕ ಚಾಂಪಿಯನ್ ಆಯ್ಕೆ ಮಾಡಲಾಗುತ್ತದೆ. ಟೈ ಆದರೆ ಗ್ರೂಪ್ ಹಂತ ಪಾಯಿಂಟ್ ಇಲ್ಲವೇ ನೆಟ್​ ರನ್​ರೇಟ್ ಗಣನೆಗೆ ಬರುವುದಿಲ್ಲ.

ನ್ಯೂಜಿಲ್ಯಾಂಡ್ ತಂಡ

ಮಳೆಯಿಂದ ಮ್ಯಾಚ್ ರದ್ದಾದರೆ?

ಲಾರ್ಡ್ಸ್‌ನಲ್ಲಿ ನಡೆಯಲಿರುವ ಇಂದಿನ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ತೀರಾ ಕಮ್ಮಿ ಎನ್ನಲಾಗಿದೆ. ಆದರೂ ಒಂದು ವೇಳೆ ವರುಣ ಎಂಟ್ರಿ ನೀಡಿದರೆ ಪಂದ್ಯವನ್ನು ಮೀಸಲು ದಿನವಾದ ನಾಳೆಗೆ ಮುಂದೂಡಲಾಗುತ್ತದೆ. ನಾಳೆಯೂ ಮಳೆ ಬಂದು ಆಟ ನಿಂತಲ್ಲಿ ಎರಡೂ ತಂಡಗಳು ಟ್ರೋಫಿ ಹಂಚಿಕೊಳ್ಳಲಿವೆ.

ಕ್ರಿಕೆಟ್ ಕಾಶಿಯಲ್ಲಿ 5ನೇ ವಿಶ್ವಕಪ್ ಫೈನಲ್​​

ಕ್ರಿಕೆಟ್ ತವರು ಇಂಗ್ಲೆಂಡ್​​ನ ಲಾರ್ಡ್ಸ್ ಮೈದಾನ ಐದನೇ ಬಾರಿಗೆ ವಿಶ್ವಕಪ್ ಫೈನಲ್ ಆತಿಥ್ಯ ವಹಿಸಿಕೊಂಡಿದೆ. ಈ ಮೂಲಕ ಅತೀ ಹೆಚ್ಚು ವಿಶ್ವಕಪ್ ಉಪಾಂತ್ಯ ಪಂದ್ಯಕ್ಕೆ ಸಾಕ್ಷಿಯಾದ ಮೈದಾನ ಎನ್ನುವ ಹೆಗ್ಗಳಿಕೆ ಲಾರ್ಡ್ಸ್ ಪಾತ್ರವಾಗಲಿದೆ. 1975, 1979, 1983, 1999ರಲ್ಲಿ ವಿಶ್ವಕಪ್ ಟೂರ್ನಿಯನ್ನು ಇಂಗ್ಲೆಂಡ್​ನಲ್ಲಿ ಆಯೋಜಿಸಲಾಗಿತ್ತು. ಈ ಎಲ್ಲ ಸಂದರ್ಭಗಳಲ್ಲೂ ಫೈನಲ್ ಮ್ಯಾಚ್ ಲಾರ್ಡ್ಸ್ ಮೈದಾನದಲ್ಲಿ ನಡೆದಿತ್ತು.

ಲಾರ್ಡ್ಸ್ ಪಿಚ್

ಚಾಂಪಿಯನ್​ ಧರ್ಮಸೇನಾ ಈಗ ಅಂಪೈರ್​!

ಫೈನಲ್​ ಪಂದ್ಯದ ಅಂಪೈರ್​ಗಳಾಗಿ ಶ್ರೀಲಂಕಾದ ಕುಮಾರ ಧರ್ಮಸೇನಾ ಹಾಗೂ ದಕ್ಷಿಣ ಆಫ್ರಿಕಾದ ಮರೈಸ್ ಎರಾಸ್ಮಸ್ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ 1996ರಲ್ಲಿ ಶ್ರೀಲಂಕಾ ಚಾಂಪಿಯನ್​ ಆದ ಸಂದರ್ಭದಲ್ಲಿ ಕುಮಾರ ಧರ್ಮಸೇನಾ ತಂಡದಲ್ಲಿದ್ದರು.

ಕುಮಾರ ಧರ್ಮಸೇನಾ

ಲಾರ್ಡ್ಸ್ ಗ್ಯಾಲರಿಯಲ್ಲಿ ಭಾರತೀಯರದ್ದೇ ಹವಾ!

ವಿಶ್ವಕಪ್​​ ಟೂರ್ನಿಯಿಂದ ಟೀಮ್ ಇಂಡಿಯಾ ಹೊರಬಿದ್ದರೂ ​ಇಂದಿನ ಫೈನಲ್​​ ವೇಳೆ ಸ್ಟೇಡಿಯಂನಲ್ಲಿ ಶೇ.41ರಷ್ಟು ಭಾರತೀಯರು ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಬಳಗ ಫೈನಲ್ ಪ್ರವೇಶಿಸಲಿದೆ ಎನ್ನುವ ಅದಮ್ಯ ವಿಶ್ವಾಸದಲ್ಲಿ ಭಾರಿ ಪ್ರಮಾಣದಲ್ಲಿ ಭಾರತೀಯ ಅಭಿಮಾನಿಗಳು ಮುಂಗಡ ಬುಕ್ಕಿಂಗ್ ಮಾಡಿದ್ದರು.

ಭಾರೀಯ ಕ್ರಿಕೆಟ್ ಅಭಿಮಾನಿಗಳು

ಗೆದ್ದ ತಂಡ ಪಡೆಯುವ ಹಣದ ಮೊತ್ತ ಎಷ್ಟು?

ನಾಲ್ಕು ಮಿಲಿಯನ್​ ಅಮೆರಿಕನ್ ಡಾಲರ್​​ ಪ್ರಶಸ್ತಿ ಹಣ ಈ ಬಾರಿಯ ವಿಶ್ವಕಪ್ ವಿಜೇತರ ಪಾಲಾಗಲಿದೆ. ಇದು ಎಲ್ಲ ಆವೃತ್ತಿಗಳಿಗಿಂತಲೂ ಅತೀ ಹೆಚ್ಚು. ರನ್ನರ್ ಅಪ್ ತಂಡಕ್ಕೆ ಎರಡು ಮಿಲಿಯನ್ ಅಮೆರಿಕನ್ ಡಾಲರ್ ದೊರೆಯಲಿದೆ.

ವಿಶ್ವಕಪ್​

ಬಾಲ್​ಬಾಯ್​ ನಿಂದ ಚಾಂಪಿಯನ್‌ವರೆಗೆ?

ತಮ್ಮ 18ನೇ ವಯಸ್ಸಿನಲ್ಲಿ ಇದೇ ಲಾರ್ಡ್ಸ್ ಮೈದಾನದಲ್ಲಿ ರಾಸ್ ಟೇಲರ್​ ಬಾಲ್​ಬಾಯ್ ಆಗಿ ಕಾಣಿಸಿಕೊಂಡಿದ್ದರು. ನ್ಯೂಜಿಲ್ಯಾಂಡ್​ನಲ್ಲಿ ಪ್ರತಿವರ್ಷ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಲಾರ್ಡ್ಸ್‌ನಲ್ಲಿರುವ ಎಂಸಿಸಿ ಯಂಗ್ ಕ್ರಿಕೆಟರ್ಸ್​ ಕ್ಲಬ್​​ನಲ್ಲಿ ಬಾಲ್​ಬಾಯ್​ ಆಗಿ ಆಯ್ಕೆ ಮಾಡಲಾಗುತ್ತದೆ. ಇದು ಉದಯೋನ್ಮುಖ ಪ್ರತಿಭೆಗಳಿಗೆ ನೀಡುವ ಗೌರವ. 17 ವರ್ಷದ ಬಳಿಕ ಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಟೇಲರ್ ಪ್ರತಿನಿಧಿಸಲಿದ್ದಾರೆ.

ರಾಸ್ ಟೇಲರ್

ಟಾಸ್ ನಿರ್ಣಾಯಕ:

ಲಾರ್ಡ್ಸ್ ಮೈದಾನದಲ್ಲಿ ನಡೆದ ಕಳೆದ ನಾಲ್ಕು ಫೈನಲ್​ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಮೂರು ಬಾರಿ ಗೆಲುವು ಸಾಧಿಸಿದೆ. ಅಚ್ಚರಿಯೆಂದರೆ ಟಾಸ್ ಗೆದ್ದ ತಂಡ ನಾಲ್ಕು ಬಾರಿಯೂ ಸೋಲು ಕಂಡಿದೆ.

ಇಂಗ್ಲೆಂಡ್ ತಂಡ

ಬ್ಯಾಟಿಂಗ್‌​, ಬೌಲಿಂಗ್​ನಲ್ಲಿ ಆರ್ಭಟಿಸುವ ಆಟಗಾರರಿಲ್ಲದ ಫೈನಲ್!

ಬ್ಯಾಟಿಂಗ್‌ನಲ್ಲಿ​ ಅಬ್ಬರಿಸಿ ಐದು ಶತಕಗಳ ಮೂಲಕ (648) ರನ್​ಹೊಳೆ ಹರಿಸಿದ್ದ ಹಿಟ್​ಮ್ಯಾನ್​ ರೋಹಿತ್ ಶರ್ಮಾ ಹಾಗೂ ಕರಾರುವಕ್ಕಾದ ಬೌಲಿಂಗ್ ಮೂಲಕ 27 ವಿಕೆಟ್ ಪಡೆದಿರುವ ಆಸೀಸ್‌ನ ಮಿಚೆಲ್ ಸ್ಟಾರ್ಕ್​ ಫೈನಲ್​​ನಲ್ಲಿ ಆಡುತ್ತಿಲ್ಲ. ಕಾರಣ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳು ಸೆಮೀಸ್​ನಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿವೆ. ವಿಶೇಷವೆಂದರೆ 1999ರ ವಿಶ್ವಕಪ್​ ಬಳಿಕ ಅತೀ ಹೆಚ್ಚು ರನ್​ ಗಳಿಸಿದ ಹಾಗೂ ಹೆಚ್ಚಿನ ವಿಕೆಟ್ ಕಿತ್ತ ಬೌಲರ್ ಫೈನಲ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಮಿಚೆಲ್ ಸ್ಟಾರ್ಕ್​
ರೋಹಿತ್ ಶರ್ಮಾ

ದಾಖಲೆ ಸನಿಹ ವಿಲಿಯಮ್ಸನ್​

ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಈ ಆವೃತ್ತಿಯಲ್ಲಿ 548 ರನ್ ಗಳಿಸಿದ್ದು, ಇನ್ನೊಂದು ರನ್ ಕಲೆಹಾಕಿದರೆ ಒಂದೇ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ನಾಯಕ ಎನ್ನುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ. ಇಂದಿನ ಪಂದ್ಯದಲ್ಲಿ ವಿಲಿಯಮ್ಸನ್​ 101 ರನ್ ಸಿಡಿಸಿದಲ್ಲಿ ರೋಹಿತ್ ಶರ್ಮಾರ ರನ್‌ ಗಳಿಕೆಯನ್ನು ಹಿಂದಿಕ್ಕಲಿದ್ದಾರೆ.​​​

ಕೇನ್ ವಿಲಿಯಮ್ಸನ್​​

ABOUT THE AUTHOR

...view details