ಮ್ಯಾಂಚೆಸ್ಟರ್: ವಿಶ್ವಕಪ್ 2019ರ ಇಂಡೋ-ವಿಂಡೀಸ್ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಔಟ್ ಎಂದು ನೀಡಿದ ತೀರ್ಪು ಮಾತ್ರ ಸಾಕಷ್ಟು ವಿವಾದ ಹುಟ್ಟುಹಾಕಿದೆ. ಇದಕ್ಕೆ ಸ್ವತಃ ರೋಹಿತ್ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಾಲ್ ಸಾಗಿದ ಗತಿಯನ್ನು ಅತ್ಯಂತ ಸಮೀಪದಲ್ಲಿ ಜೂಮ್ ಮಾಡಿರುವ ಫೋಟೋ ಪೋಸ್ಟ್ ಮಾಡಿ, ಮುಖದ ಮೇಲೆ ಕೈ ಹಾಕಿಕೊಂಡ, ದೊಡ್ಡ ಕಣ್ಣುಗಳ ಎಮೋಜಿಸ್ ಹಾಕಿದ್ದಾರೆ. ಈ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 23 ಎಸೆತಗಳಲ್ಲಿ 18 ರನ್ ಗಳಿಸಿದ್ದ ರೋಹಿತ್, 6ನೇ ಓವರ್ನಲ್ಲಿ ಕೆಮರ್ ರೋಚ್ ಬೌಲಿಂಗ್ ವೇಳೆ ಸರಿಯಲ್ಲದ ತೀರ್ಪಿನಿಂದ ಹೊರನಡೆಯಬೇಕಾಯ್ತು. ಕೊನೆಯ ಎಸೆತದಲ್ಲಿ ರೋಹಿತ್ ಡಿಫೆನ್ಸ್ ಮಾಡಿದಾಗ, ಬಾಲ್ ಸೀದಾ ಕೀಪರ್ ಕೈ ಸೇರಿತ್ತು. ಬಾಲ್ ಬ್ಯಾಟಿಗೆ ತಾಗಿ, ಕೀಪರ್ ಕೈಸೇರಿದೆ ಎಂದು ವಿಂಡೀಸ್ ತಂಡ ಅಫೀಲ್ ಸಲ್ಲಿಸಿತು.
ಮೈದಾನದಲ್ಲಿದ್ದ ಅಂಪೈರ್ ನಾಟ್ ಔಟ್ ಎಂದರೂ, ರಿವ್ಯೂವ್ ಮೊರೆ ಹೋಗಿದ್ದರಿಂದ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ರೋಹಿತ್ ಔಟ್ ಆಗಿಲ್ಲ ಎಂದು ಹಲವರು ತೀರ್ಪುಗಾರರ ಮೇಲೆ ಟೀಕೆ ವ್ಯಕ್ತಪಡಿಸಿದರು. ಇದೀಗ ಸ್ವತಃ ರೋಹಿತ್ ತಾವೇ ಪ್ರತಿಕ್ರಿಯಿಸಿ, ಅಸಮಾಧಾನ ಹೊರಹಾಕಿದ್ದಾರೆ.