ಹೈದರಾಬಾದ್: 2019ರ ವಿಶ್ವಕಪ್ ಟೂರ್ನಮೆಂಟ್ನಲ್ಲಿ ಪಾಲ್ಗೊಳ್ಳಲೂ ಕೂಡ ಕಷ್ಟಪಡುತ್ತಿದ್ದ ವೆಸ್ಟ್ ಇಂಡೀಸ್ ಟೀಂ, ಪ್ರಸ್ತುತ ಉತ್ತಮ ಪ್ರದರ್ಶನ ತೋರುತ್ತಿದೆ.
ಎರಡು ಬಾರಿ ಏಕದಿನ ವಿಶ್ವಕಪ್ ಟ್ರೋಫಿ ಮತ್ತು ಎರಡು ಬಾರಿ ಟಿ-20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಕೆರಿಬಿಯನ್ನರು, ಈ ಬಾರಿಯೂ ವಿಶ್ವಕಪ್ ಟೂರ್ನಮೆಂಟ್ಗೆ ಅರ್ಹತೆ ಪಡೆಯಲು ಕಷ್ಟ ಪಡಬೇಕಾಯ್ತು.ಅಫ್ಘಾನಿಸ್ತಾನ, ಜಿಂಬಾಂಬೆ, ಸ್ಕಾಟ್ಲೆಂಡ್ ಸೇರಿದಂತೆ ಇತರ ಕ್ರಿಕೆಟ್ ಶಿಶುಗಳೊಂದಿಗೆ ಸೆಣಸಿ ಅರ್ಹತೆ ಪಡೆದುಕೊಳ್ಳುವ ಪರಿಸ್ಥಿತಿ ವಿಂಡೀಸ್ ಟೀಂಗೆ ಎದುರಾಗಿತ್ತು.
ವಿಂಡೀಸ್ ಕ್ರಿಕೆಟ್ ಬೋರ್ಡ್ಗೂ, ಆಟಗಾರರಿಗೂ ಮುಸುಕಿನ ಗುದ್ದಾಟ!
ವೆಸ್ಟ್ ಇಂಡೀಸ್ನಂತ ಬಲಿಷ್ಠ ತಂಡಕ್ಕೂ, ಅಲ್ಲಿನ ಕ್ರಿಕೆಟ್ ಬೋರ್ಡ್ಗೂ ಆಗಾಗ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತೆ. ವೇತನದ ವಿಚಾರದಲ್ಲಿ ಆಗಾಗ ಒಳಜಗಳಗಳೂ ನಡೆಯುತ್ತಲೇ ಇರುತ್ತವೆ. ಹೀಗಾಗಿ 2016ರ ಟಿ-20 ವಿಶ್ವಕಪ್ ಟೂರ್ನಿಗೆ ಬರುವ ಮೊದಲು ವಿಂಡೀಸ್ ಆಟಗಾರರಿಗೆ ಭಾರೀ ಆರ್ಥಿಕ ಸಮಸ್ಯೆ ಉಂಟಾಗಿತ್ತು.
ಕಷ್ಟದಲ್ಲಿದ ವಿಂಡೀಸ್ ಟೀಂ ಕೈ ಹಿಡಿದಿದ್ದು ದಾದಾ!
ಭಾರತದಲ್ಲಿ ನಡೆದ 2016ರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಸಮಯದಲ್ಲಿ ವಿಂಡೀಸ್ ಆಟಗಾರರಿಗೆ ಜರ್ಸಿ ತೆಗೆದುಕೊಳ್ಳಲು ಕೂಡ ಸಾಧ್ಯವಾಗಿರಲಿಲ್ಲ.ಆರ್ಥಿಕ ಸಮಸ್ಯೆಯಿಂದ ವಿಂಡೀಸ್ ಆಟಗಾರರು ನಲುಗಿ ಹೋಗಿದ್ದರು. ಅಂಥಾ ಸಮಯದಲ್ಲಿ ಕೆರಿಬಿಯನ್ನರಿಗೆ ನೆರವಾಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ.
ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಸೌರವ್ ಗಂಗೂಲಿ ಸಹಾಯ ಹಸ್ತ ಚಾಚಿದ್ದರು. ಹೀಗೆ ಕಷ್ಟದಲ್ಲಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕೆರಿಬಿಯನ್ನರು ಭರ್ಜರಿ ಪ್ರದರ್ಶನ ತೋರಿದ್ದರು. ಕೋಲ್ಕತ್ತಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಂಗ್ಲರನ್ನು ಸದೆ ಬಡಿದು ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡಿದ್ದರು.
ಏಕದಿನ ವಿಶ್ವಕಪ್ನಲ್ಲೂ ಮರುಕಳಿಸುವುದೇ ಇತಿಹಾಸ!
2016ರಂತೆ ಆರ್ಥಿಕ ಸಮಸ್ಯೆ ಇಲ್ಲದಿದ್ದರೂ 2019ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅರ್ಹತೆ ಪಡೆಯಬೇಕಾದರೆ ವಿಂಡೀಸ್ ಸಾಕಷ್ಟು ಕಷ್ಟಪಡಬೇಕಾಯಿತು. ವಿಂಡೀಸ್ ಹೀಗೆ ಕಷ್ಟಪಟ್ಟು ಭಾಗವಹಿಸಿದ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಪ್ರಸಕ್ತ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆರಿಬಿಯನ್ನರು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಎರಡನೇ ಪಂದ್ಯದಲ್ಲಿ ಬಲಿಷ್ಟ ಆಸೀಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಈ ಬಾರಿಯೂ ಕೂಡ ವಿಂಡೀಸ್ 2019ರ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.