ಲಾರ್ಡ್ಸ್:ಕಳೆದ ಒಂದೂವರೆ ತಿಂಗಳಿನಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ ವಿಶ್ವಕಪ್ ಟೂರ್ನಿ ಇಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಅದ್ಧೂರಿಯಾಗಿ ಕೊನೆಗೊಳ್ಳಲಿದೆ.
'ಕ್ರಿಕೆಟ್ ಕಾಶಿ'ಯಲ್ಲಿ ಫೈನಲ್ ಮ್ಯಾಚ್: ಪ್ರತಿಷ್ಟಿತ ಪ್ರಶಸ್ತಿಗೆ ಮುತ್ತಿಡುವವರಾರು?
ಈ ಆವೃತ್ತಿಯ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಉಪಾಂತ್ಯ ಪ್ರವೇಶಿಸಲಿದೆ ಎನ್ನುವ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ನ್ಯೂಜಿಲ್ಯಾಂಡ್ ತಂಡ ಫೈನಲ್ನಲ್ಲಿ ಆತಿಥೇಯರನ್ನು ಎದುರಿಸುತ್ತಿದೆ. ಕೊಹ್ಲಿ ಬಳಗವನ್ನು ಸೋಲಿಸಿದ ಹೊರತಾಗಿಯೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಿವೀಸ್ ತಂಡವನ್ನೇ ಬೆಂಬಲಿಸುತ್ತಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ...
ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಕ್ರಿಕೆಟ್ ಫ್ಯಾನ್ಸ್ ನ್ಯೂಜಿಲ್ಯಾಂಡ್ ತಂಡಕ್ಕೆ ಬೆಂಬಲ ನೀಡಿದ್ದಾರೆ. ಅಷ್ಟಕ್ಕೂ ಭಾರತೀಯರಿಗೆ ಕೇನ್ ವಿಲಿಯಮ್ಸನ್ ನಡೆ ಬಲು ಇಷ್ಟವಾಗಿದೆ. ಸೋಲು ಹಾಗೂ ಗೆಲುವನ್ನು ಒಂದೇ ತೆರನಾಗಿ ಸ್ವೀಕರಿಸುವ ನ್ಯೂಜಿಲ್ಯಾಂಡ್ ನಾಯಕ ಭಾರತೀಯರ ಮನ ಗೆದ್ದಿದ್ದಾರೆ.
ಟೀಂ ಇಂಡಿಯಾವನ್ನು ಸೆಮೀಸ್ನಲ್ಲಿ ಸೋಲಿಸಿದ ನ್ಯೂಜಿಲ್ಯಾಂಡ್ ವಿಶೇಷವಾಗಿ ಸಂಭ್ರಮಾಚರಣೆ ಮಾಡಿರಲಿಲ್ಲ. ಪಂದ್ಯದ ಬಳಿಕವೂ ಕೇನ್ ವಿಲಿಯಮ್ಸನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಉತ್ತಮವಾಗಿ ಮಾತನಾಡಿದ್ದರು.
ಬ್ರಾತ್ವೇಟ್ ಹೋರಾಟವನ್ನು ಅಭಿನಂದಿಸಿದ ಕಿವೀಸ್ ಆಟಗಾರರು
ಲೀಗ್ ಹಂತದಲ್ಲಿ ವಿಂಡೀಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ವೇಳೆ ಕೆರಬಿಯನ್ ಆಟಗಾರ ಬ್ರಾತ್ವೇಟ್ ಬಳಿ ತೆರಳಿ ಅಭಿನಂದಿಸಿದ ಕಿವೀಸ್ ಆಟಗಾರರ ನಡೆ ನೆಟಿಜನ್ಸ್ ಮನ ಗೆದ್ದಿತ್ತು. ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಎಲ್ಲ ಆಟಗಾರರ ಸಹೃದಯಿ ವರ್ತನೆಯೇ ಇಂದು ಭಾರತೀಯ ಅಭಿಮಾನಿಗಳನ್ನು ಆಕರ್ಷಿಸಿದ್ದು, ಫೈನಲ್ನಲ್ಲಿ ಬೆಂಬಲಿಸುವಂತೆ ಮಾಡಿದೆ.