ಲಂಡನ್: 45 ದಿನಗಳ ಕಾಲ ಅಭಿಮಾನಿಗಳನ್ನ ರಂಜಿಸಿದ ಕ್ರಿಕೆಟ್ ಫೈಟ್ ಕೊನೇ ಹಂತ ತಲುಪಿದೆ. ಸದ್ಯ ಟೂರ್ನಿಯಲ್ಲಿ ಫೈನಲ್ ಪಂದ್ಯ ಮಾತ್ರ ಬಾಕಿ ಇದ್ದು, ಪ್ರಶಸ್ತಿಗಾಗಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಫೈಟ್ ನಡೆಯಲಿದೆ. ಮೇಲ್ನೋಟಕ್ಕೆ ಇಂಗ್ಲೆಂಡ್ ತಂಡ ಬಲಿಷ್ಠವಾಗಿ ಕಂಡರೂ ಕೂಡ ನ್ಯೂಜಿಲ್ಯಾಂಡ್ ತಂಡವನ್ನ ಕಡೆಗಣಿಸುವಂತಿಲ್ಲ. ಭಾರತದ ಫೈನಲ್ ಆಸೆಯನ್ನ ಚಿವುಟಿ ಹಾಕಿ ಬಂದಿರುವ ಬ್ಲಾಕ್ ಕ್ಯಾಪ್ಸ್ ಆಂಗ್ಲರಿಗೂ ಸೋಲಿನ ರುಚಿ ತೋರಿಸುವ ಸಾಮರ್ಥ್ಯ ಹೊಂದಿದೆ.
ಲೀಗ್ ಹಂತದಲ್ಲಿ ಸತತ ಐದು ಪಂದ್ಯಗಳನ್ನ ಗೆದ್ದಿದ್ದ ನ್ಯೂಜಿಲ್ಯಾಂಡ್ ನಂತರ ಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇನ್ನು ಸೆಮೀಸ್ನಲ್ಲಿ ಅಮೋಘ ಬೌಲಿಂಗ್ ದಾಳಿ ಮೂಲಕ ಭಾರತ ತಂಡಕ್ಕೆ ಆಘಾತ ನೀಡಿ ಫೈನಲ್ ತಲುಪಿದೆ. ಮತ್ತೊಂದು ಕಡೆ ಇಂಗ್ಲೆಂಡ್ ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿ 9 ಪಂದ್ಯಗಳ ಪೈಕಿ ಆರು ಪಂದ್ಯ ಗೆದ್ದಿತ್ತು, ಅಷ್ಟೇ ಅಲ್ಲದೇ ಸೆಮೀಸ್ನಲ್ಲಿ ಡಿಫೆಂಡಿಂಗ್ ಚಾಂಪಿಯನ್ ಆಸ್ಟ್ರೇಲಿಯಾವನ್ನ ಹೀನಾಯವಾಗಿ ಸೋಲಿಸಿದೆ. ಆ ಮೂಲಕ ಎರಡೂ ತಂಡಗಳೂ ಈಗ ಫೈನಲ್ ತಲುಪಿದ್ದು ಚೊಚ್ಚಲ ವಿಶ್ವಕಪ್ ಮೇಲೆ ಕಣ್ಣಿಟ್ಟಿವೆ.
ಫೈನಲ್ನಲ್ಲಿ ಮೂರು ಬಾರಿ ಮುಗ್ಗರಿಸಿದೆ ಇಂಗ್ಲೆಂಡ್!
ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳು ಎಷ್ಟೇ ಬಲಿಷ್ಠವಾಗಿದ್ದರೂ ಇದುವರೆಗೂ ವಿಶ್ವಕಪ್ ಗೆಲ್ಲುವ ಕನಸು ನನಸಾಗಿಲ್ಲ, ಕ್ರಿಕೆಟ್ ಜನಕರೆನಿಸಿಕೊಂಡ ಇಂಗ್ಲೆಂಡ್ 1979, 1987 ಮತ್ತು 1992ರಲ್ಲಿ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲದೆ ನಿರಾಸೆ ಅನುಭವಿಸಿತ್ತು. ಇನ್ನೂ ನ್ಯೂಜಿಲೆಂಡ್ ಸಹ 2015ರಲ್ಲಿ ಫೈನಲ್ ವರೆಗೂ ಬಂದು ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಸದ್ಯ ಈಗ ಎರಡೂ ತಂಡಗಳು ಮತ್ತೊಮ್ಮೆ ಫೈನಲ್ ತಲುಪಿದ್ದು, ವಿಶ್ವಕಪ್ ಎತ್ತಿ ಹಿಡಿಯುವ ಹಂಬಲದಲ್ಲಿವೆ.