ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ 14ನೇ ಆವೃತ್ತಿಯ ಬಳಿಕ ಆರ್ಸಿಬಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದಾರೆ. ಆದ್ರೆ ಐಪಿಎಲ್ ಆಡುವವರೆಗೂ ನಾನು ಆರ್ಸಿಬಿಯಲ್ಲೇ ಆಟಗಾರನಾಗಿ ಮುಂದುವರಿಯುವುದಾಗಿ ಅನೌನ್ಸ್ ಮಾಡಿದ್ದಾರೆ.
ಆರ್ಸಿಬಿ ಟ್ವೀಟ್ ಮಾಡಿ ಇದನ್ನು ಅಧಿಕೃತಗೊಳಿಸಿದೆ. ನಾಯಕತ್ವ ಸ್ಥಾನದಿಂದ ಮಾತ್ರ ಕೆಳಗಿಳಿಯುವೆ, ಆದ್ರೆ ಆರ್ಸಿಬಿ ಆಟಗಾರನಾಗಿ ಮುಂದುವರಿಯುವೆ ಎಂದು ಕೊಹ್ಲಿ ತಿಳಿಸಿದ್ದಾರೆ.
ದುಬೈನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ನಂತರ ಟಿ-20 ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದಾಗಿ ಇತ್ತೀಚೆಗಷ್ಟೇ ಕೊಹ್ಲಿ ಘೋಷಣೆ ಮಾಡಿದ್ದರು. ಆ ಬೆನ್ನಲ್ಲೇ ಇದೀಗ ಮತ್ತೊಂದು ಅಚ್ಚರಿಯ ಘೋಷಣೆ ಮಾಡಿದ್ದಾರೆ.
ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಮುಕ್ತಾಯಗೊಳ್ತಿದ್ದಂತೆ ಕೊಹ್ಲಿ ಟೆಸ್ಟ್ ತಂಡಕ್ಕೆ ಮಾತ್ರ ನಾಯಕನಾಗಿರಲಿದ್ದಾರೆ. ರೋಹಿತ್ ಶರ್ಮಾ ಟಿ-20 ಹಾಗೂ ಏಕದಿನ ಕ್ರಿಕೆಟ್ನ ಕ್ಯಾಪ್ಟನ್ ಆಗಲಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.