ಮ್ಯಾಂಚೆಸ್ಟರ್ (ಇಂಗ್ಲೆಂಡ್) :ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ ಗೆದ್ದು ಬೀಗಿದ್ದು, ಕೋಟ್ಯಾಂತರ ಅಭಿಮಾನಿಗಳ ಆಶಯ ಕಡೆಗೂ ನೆರವೇರಿದೆ.
ಮ್ಯಾಂಚೆಸ್ಟರ್ನ ಎಮಿರೇಟ್ಸ್ ಓಲ್ಡ್ ಟ್ಯಾಫೋರ್ಡ್ ಮೈದಾನದಲ್ಲಿ ನಡೆದ ಇಂಡೋ ಪಾಕ್ ಕದನದಲ್ಲಿ, ಗೆಲ್ಲುವ ಫೇವರೇಟ್ ಟೀಂ ಇಂಡಿಯಾ, ಡಕ್ವರ್ತ್ ಲೂಯೀಸ್ ನಿಯಮದ ಪ್ರಕಾರ 89 ರನ್ಗಳ ಅಂತರದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿ ಪಾಕ್ಗೆ ಬೃಹತ್ ಟಾರ್ಗೆಟ್ ನೀಡಿತು. ಗುರಿ ಬೆನ್ನತ್ತಿದ ಪಾಕ್, ಆರಂಭದಲ್ಲೇ ಆಘಾತಕ್ಕೊಳಗಾಯ್ತು. ಪಾಕ್ನ ಆರಂಭಿಕ ಆಟಗಾರರಾದ ಇಮಾಮ್ -ಉಲ್-ಹಕ್ ಹಾಗೂ ಫಖಾರ್ ಝಮಾನ್ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ ತಮ್ಮ ಮೊದಲ ಎಸೆತದಲ್ಲೇ ವಿಜಯ್ ಶಂಕರ್, ಇಮಾಮ್ -ಉಲ್-ಹಕ್(7)ರನ್ನು ಎಲ್ಬಿಡ್ಲ್ಯೂ ಬಲೆಗೆ ಬೀಳಿಸಿದರು. ಬಳಿಕ ಒಂದಾದ ಫಖಾರ್ ಝಮಾನ್ ಹಾಗೂ ಬಾಬರ್ ಅಝಾಮ್ ಶತಕದ ಜೊತೆಯಾಟ ನೀಡಿದರು.
48 ರನ್ಗಳಿಸಿ ಕ್ರೀಸ್ಗಚ್ಚಿ ಆಡುತ್ತಿದ್ದ ಬಾಬರ್ ಅಝಾಮ್, ಕುಲ್ದೀಪ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಬಳಿಕ ಪಾಕ್ ಆಟಗಾರರು, ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಆಕರ್ಷಕ ಅರ್ಧಶತಕ ದಾಖಲಿಸಿ ಆಡುತ್ತಿದ್ದ ಫಖಾರ್ ಝಮಾನ್ಗೆ ಮತ್ತೆ ಕುಲ್ದೀಪ್ ಕಂಟಕವಾದರು. ಬಳಿಕ ಬಂದ ಅನುಭವಿ ಆಟಗಾರ ಮೊಹಮ್ಮದ್ ಹಫೀಝ್(9) ಭಾರೀ ಹೊಡೆತಗಳಿಗೆ ಮುಂದಾಗಿ, ಹಾರ್ದಿಕ್ ಪಾಂಡ್ಯಾ ಎಸೆತದಲ್ಲಿ ವಿಜಯ್ ಶಂಕರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಶೋಯೆಬ್ ಮಲಿಕ್, ಹಾರ್ದಿಕ್ ಪಾಂಡ್ಯಾ ಎಸೆತದಲ್ಲಿ ಗೋಲ್ಡನ್ ಡಕ್ಗೆ ಔಟಾದರು.
ತಾಳ್ಮೆಯಿಂದ ನಾಯಕನ ಆಟಕ್ಕೆ ಮುಂದಾದ ಸರ್ಫರಾಜ್ ಅಹ್ಮದ್, 30 ಎಸೆತಗಳಲ್ಲಿ 12 ರನ್ ಗಳಿಸಿ ಆಡುತ್ತಿದ್ದಾಗ, ಶಂಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು.
ಬಳಿಕ ಇಮಾದ್ ವಾಸಮ್ ಹಾಗೂ ಶದಾಬ್ ಖಾನ್ ಜೊತೆಗೂಡಿ ಆಡುತ್ತಿದ್ದಾಗ, ಮತ್ತೆ ಎಂಟ್ರಿ ಕೊಟ್ಟ ವರುಣ, ಕೆಲಕಾಲ ಪಂದ್ಯಕ್ಕೆ ಬ್ರೇಕ್ ಕೊಟ್ಟಿತು. 35 ಒವರ್ಗಳಲ್ಲಿ ಪಾಕ್ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಆಡುತ್ತಿದ್ದಾಗ ಮತ್ತೆ ಮಳೆ ಎಂಟ್ರಿ ಕೊಟ್ಟಿತು.