ಲಂಡನ್:ಭಾರತ ತಂಡವು ಆಂಗ್ಲರ ವಿರುದ್ಧ ಗೆಲುವಿಗೆ ಹೆಚ್ಚಿನ ಪ್ರಯತ್ನ ನಡೆಸಲಿಲ್ಲ ಎಂಬ ಆರೋಪ ಸರಿಯಲ್ಲ. ಆದರೆ, ಇಂಗ್ಲೆಂಡ್ ಬೌಲರ್ಗಳು ಪಂದ್ಯದ ಸಂದರ್ಭವನ್ನು ಅರಿತು ಬೌಲಿಂಗ್ ಮಾಡಿದರು. ಹೀಗಾಗಿ ರನ್ ಚೇಸ್ ಮಾಡುವುದು ಸುಲಭವಾಗಿರಲಿಲ್ಲ ಎಂದು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಸೋಲಿನ ಬಗ್ಗೆ ಸಮರ್ಥನೆ ನೀಡಿದ್ದಾರೆ.
ದೊಡ್ಡ ಬೌಂಡರಿ ಹೊಂದಿರುವ ಮೈದಾನದಲ್ಲಿ, ಇಂಗ್ಲೆಂಡ್ನಂತಹ ಬೌಲಿಂಗ್ ಎದುರಿಸುವುದು ಸುಲಭವಲ್ಲ. ಆಂಗ್ಲರು ಮಾಡಿದ ನಿಧಾನಗತಿಯ ಬೌನ್ಸರ್ಗಳು ವಿಕೆಟ್ ಕಬಳಿಸುವ ಅಸ್ತ್ರಗಳಾಗಿವೆ. ಅಲ್ಲದೆ ಕೊನೆಯ ಓವರ್ಗಳಲ್ಲಿ ಬೇಕಾದ ರನ್ ರೇಟ್ ಕೂಡ ಗಳಿಸುವ ಮಟ್ಟದಲ್ಲಿರಲಿಲ್ಲ. ದೊಡ್ಡ ಹೊಡೆತಗಳಿಗೆ ಕೈಹಾಕಿದ್ದರೂ ಕೂಡ ಕೇವಲ ಸೋಲಿನ ಅಂತರ ತಗ್ಗಿಸಬಹುದಿತ್ತು. ಅಲ್ಲದೆ ರನ್ ಸರಾಸರಿಗೆ ಸಹಾಯವಾಗುತ್ತಿತ್ತು ಎಂದು ಹೇಳಿದ್ದಾರೆ.
ಇನ್ನು ಧೋನಿ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಬಂಗಾರ್, ಅದು ಕೇವಲ ಒಂದು ಕೆಟ್ಟ ಇನ್ನಿಂಗ್ಸ್ ಅಷ್ಟೇ. ಧೋನಿ ಯಾವಾಗಲೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದ್ದಾರೆ. 7 ರಲ್ಲಿ 5 ಇನ್ನಿಂಗ್ಸ್ಗಳಲ್ಲಿ ಧೋನಿ ಆಟ ತಂಡಕ್ಕೆ ವರದಾನವಾಗಿದೆ. ಆದರೆ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಯಾವಾಗಲೂ ಪ್ರಶ್ನೆ ಮೂಡುವುದು ನನಗೆ ಅಚ್ಚರಿ ಮೂಡಿಸುತ್ತದೆ. ಅವರ ಬ್ಯಾಟಿಂಗ್, ಅವರ ಉದ್ದೇಶದ ಬಗ್ಗೆ ನಮಗೆ ಸಂತಸವಿದೆ ಎಂದು ಎಂಎಸ್ಡಿ ಪರ ಬ್ಯಾಟ್ ಬೀಸಿದ್ದಾರೆ.
ತಂಡಕ್ಕೆ ಅಗತ್ಯವಿರುವ ಸಂದರ್ಭಗಳಲ್ಲೆಲ್ಲ ಹಾರ್ದಿಕ್ ಪಾಂಡ್ಯರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾವಣೆ ಮಾಡಲಾಗುತ್ತೆ. ಪಾಂಡ್ಯ 33-34ನೇ ಓವರ್ ವೇಳೆ ಮೈದಾನಕ್ಕಿಳಿದರೆ ತಂಡದ ಸ್ಕೋರ್ ದೃಷ್ಟಿಯಿಂದ ಅನುಕೂಲವಾಗುತ್ತದೆ. ಅಬ್ಬರದ ಬ್ಯಾಟಿಂಗ್ನಿಂದ ಹಾರ್ದಿಕ್ ಈ ವಿಶ್ವಕಪ್ನಲ್ಲಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದ್ದು, ಅದನ್ನು ಮುಂದುರಿಸಲಿದ್ದಾರೆ ಎಂದು ಬಂಗಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.