ನವದೆಹಲಿ: ವಿಶ್ವಕಪ್ 2019ರ ಸೌತ್ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ವೇಳೆ ಎಂ.ಎಸ್ ಧೋನಿ ಹಾಕಿಕೊಂಡಿದ್ದ ಗ್ಲೌಸ್ ಐಸಿಸಿಯ ಕೆಂಗಣ್ಣಿಗೆ ಗುರಿಯಾಗಿದೆ.
ವಿಕೆಟ್ ಕೀಪಿಂಗ್ ವೇಳೆ ಧೋನಿ ಭಾರತೀಯ ಸೇನೆಯ ತುಕಡಿ ಪ್ಯಾರಾ ಸ್ಪೆಷಲ್ ಫೋರ್ಸ್ನ ಲಾಂಛನವಿರುವ ಗ್ಲೌಸ್ ಧರಿಸಿದ್ದರು. ಕೂಡಲೇ ಧೋನಿ ಗ್ಲೌಸ್ನಿಂದ ಈ ಲಾಂಛನವನ್ನು ತೆಗದುಹಾಕುವಂತೆ ಐಸಿಸಿ, ಬಿಸಿಸಿಐಗೆ ಸೂಚಿಸಿದೆ.
ಇದನ್ನೂ ಓದಿ:ಭಾರತೀಯ ಯೋಧರ 'ಬಲಿದಾನ' ಲೋಗೋವಿರುವ ಗ್ಲೌಸ್ ತೊಟ್ಟ ಧೋನಿ: ದೇಶದೆಲ್ಲೆಡೆ ಶ್ಲಾಘನೆ
ಐಸಿಸಿಯ ಸ್ಟ್ರಾಟರ್ಜಿಕ್ ಕಮ್ಯುನಿಕೇಷನ್ನ ಜನರಲ್ ಮ್ಯಾನೇಜರ್ ಕ್ಲಾರೀ ಫರ್ಲಾಂಗ್ ಮಾತನಾಡಿ, ಧೋನಿ ಗ್ಲೌಸ್ನಿಂದ ಈ ಲಾಂಛನ ತೆಗೆಯುವಂತೆ ಬಿಸಿಸಿಐಗೆ ತಿಳಿಸಿದ್ದೇವೆ ಎಂದಿದ್ದಾರೆ.
ಸೌತ್ ಆಫ್ರಿಕಾದ ಆ್ಯಡಿಲ್ ಫೆಹ್ಲುಕ್ವಾಯೊ ಬ್ಯಾಟಿಂಗ್ ವೇಳೆ ಸ್ಟಂಪ್ ಮಾಡುವಾಗ ಧೋನಿಯ ಗ್ಲೌಸ್ ಮೇಲಿನ ಈ ಲಾಂಛನ ಕಂಡುಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇದು ತುಂಬಾನೇ ಸುದ್ದಿ ಮಾಡಿತ್ತು. ಧೋನಿ ಅಭಿಮಾನಿಗಳಿಗೆ ಇದಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರು.
ಆದರೆ ಐಸಿಸಿ, ನಿಮಯ ಉಲ್ಲಂಘನೆ ಎಂದು ಹೇಳಿದೆ. ನಿಯಮದಂತೆ, ಯಾವುದೇ ರಾಜಕೀಯ, ಧರ್ಮ, ಜನಾಂಗವನ್ನು ಸೂಚಿಸುವ ಸಲಕರಣೆ ಹಾಗೂ ಬಟ್ಟೆಗಳನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಳಸುವಂತಿಲ್ಲ. 2011ರಲ್ಲಿ ಧೋನಿಗೆ ಸೇನೆ ಲೆಫ್ಟಿನೆಂಟ್ ಕರ್ನಲ್ ದರ್ಜೆಯ ಗೌರವ ನೀಡಿ, ಅಲ್ಪಾವಧಿಯ ತರಬೇತಿಯನ್ನೂ ನೀಡಿದೆ.