ನವದೆಹಲಿ: ಐಸಿಸಿ ಟಿ-20 ವಿಶ್ವಕಪ್ ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಈ ವೇಳೆ, ತಂಡದಲ್ಲಿ ಮಹತ್ವದ ಬದಲಾವಣೆಯಾಗಲಿವೆ.
ವಿಶ್ವಕಪ್ ಮುಕ್ತಾಯಗೊಳ್ಳುತ್ತಿದ್ದಂತೆ ಈ ಸರಣಿ ಆರಂಭಗೊಳ್ಳಲಿರುವ ಕಾರಣ ಅನೇಕ ಹಿರಿಯ ಪ್ಲೇಯರ್ಸ್ಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಹಂಗಾಮಿ ಕೋಚ್ ಆಗಿ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಭಾರತದಲ್ಲಿ ನ್ಯೂಜಿಲ್ಯಾಂಡ್ ತಂಡ ಮೂರು ಟಿ - 20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದ್ದು, ನವೆಂಬರ್ 17,19 ಹಾಗೂ 21ರಂದು ಈ ಪಂದ್ಯಗಳು ಜೈಪುರ್, ರಾಂಚಿ ಹಾಗೂ ಕೋಲ್ಕತ್ತಾದಲ್ಲಿ ನಡೆಯಲಿವೆ. ಇದಾದ ಬಳಿ ಎರಡು ಟೆಸ್ಟ್ ಪಂದ್ಯಗಳು ಕಾನ್ಪುರ್ ಹಾಗೂ ಮುಂಬೈನಲ್ಲಿ ಆಯೋಜನೆಗೊಂಡಿವೆ.
ಇದನ್ನೂ ಓದಿರಿ:IPL ಫೈನಲ್ಗೆ ಲಗ್ಗೆ ಹಾಕಿದ ಕೋಲ್ಕತ್ತಾ: ಅಯ್ಯರ್, ಗಿಲ್ ಆಟ ಹಾಡಿ ಹೊಗಳಿದ ಮಾರ್ಗನ್
ಯುವ ಪ್ಲೇಯರ್ಸ್ಗೆ ಮಣೆ ಸಾಧ್ಯತೆ
ಬಹುತೇಕ ಹಿರಿಯ ಪ್ಲೇಯರ್ಸ್ ಈಗಾಗಲೇ ಐಪಿಎಲ್ನಲ್ಲಿ ಭಾಗಿಯಾಗಿದ್ದು, ಇದರ ಬೆನ್ನಲ್ಲೇ ಟಿ - 20 ವಿಶ್ವಕಪ್ನಲ್ಲಿ ಆಡುವ ಕಾರಣ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ.
ಪ್ರಮುಖವಾಗಿ ಕಳೆದ ಜೂನ್ ತಿಂಗಳಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆರಂಭಗೊಂಡಾಗಿನಿಂದಲೂ ಟೀಂ ಇಂಡಿಯಾದ ಅಗ್ರ ಪ್ಲೇಯರ್ಸ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಜಡೇಜಾ ಸೇರಿದಂತೆ ಅನೇಕರು ಬಯೋ - ಬಬಲ್ನಲ್ಲಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಹೀಗಾಗಿ ಯುವ ಪ್ಲೇಯರ್ಸ್ಗಳಾದ ಋತುರಾಜ್ ಗಾಯಕ್ವಾಡ್, ಹರ್ಷಲ್ ಪಟೇಲ್,ಆವೇಶ್ ಖಾನ್, ವೆಂಕಟೇಶ್ ಅಯ್ಯರ್ನಂತರ ಪ್ಲೇಯರ್ಸ್ ಈ ಸರಣಿಯಲ್ಲಿ ಅವಕಾಶ ಪಡೆದುಕೊಳ್ಳಬಹುದಾಗಿದೆ.
ಹಂಗಾಮಿ ಕೋಚ್ ಆಗಿ ರಾಹಲ್ ದ್ರಾವಿಡ್
ವಿಶ್ವಕಪ್ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅಧಿಕಾರ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ನ್ಯೂಜಿಲ್ಯಾಂಡ್ ಸರಣಿಯಲ್ಲಿ ದ್ರಾವಿಡ್ ಹಂಗಾಮಿ ಕೋಚ್ ಆಗಿ ಸೇವೆ ಸಲ್ಲಿಸುವ ಸಾಧ್ಯತೆ ಇದೆ.
ಈಗಾಗಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ದ್ರಾವಿಡ್ ಅವರ ಮೇಲೆ ಮುಂದಿನ ವರ್ಷ ನಡೆಯಲಿರುವ ಅಂಡರ್-19 ವಿಶ್ವಕಪ್ಗಾಗಿ ತಂಡ ಸಿದ್ಧಪಡಿಸಬೇಕಾದ ದೊಡ್ಡ ಜವಾಬ್ದಾರಿಯೂ ಇದೆ. ಇದರ ಮಧ್ಯೆ ನ್ಯೂಜಿಲ್ಯಾಂಡ್ ಸರಣಿಗೆ ಅವರು ಕೋಚ್ ಆಗುವ ಸಾಧ್ಯತೆ ಇದೆ.
ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಬಿಸಿಸಿಐ ಈಗಾಗಲೇ ಮಗ್ನವಾಗಿದ್ದು, ಭಾರತದ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ದ್ರಾವಿಡ್ ಸೇರಿದಂತೆ ಅನೇಕರ ಹೆಸರು ಈ ಪಟ್ಟಿಯಲ್ಲಿ ಕೇಳಿ ಬರುತ್ತಿವೆ. ಈ ಹಿಂದೆ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗಿದ್ದ ಯುವ ಪಡೆಗೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು.