ಲಂಡನ್: ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇತ್ತ ಸರಣಿ 1-1ರಿಂದ ಸಮಬಲ ಸಾಧಿಸಿದ್ದು, ಗೆಲುವಿಗಾಗಿ ಉಭಯ ತಂಡಗಳು ಪೈಪೋಟಿ ನಡೆಸುತ್ತಿವೆ.
ಈ ಮಧ್ಯೆ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಹೀಗಾಗಿ ಇವರ ಜೊತೆ ತಂಡದ ಮೂವರು ಭಾರತೀಯ ಸಹಾಯಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ರವಿಶಾಸ್ತ್ರಿ ಜೊತೆ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹಾಗೂ ಫಿಸಿಯೋ ನಿತಿನ್ ಪಟೇಲ್ ಸದ್ಯ ಕ್ವಾರಂಟೈನ್ ಆಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
'ಬಿಸಿಸಿಐ ವೈದ್ಯಕೀಯ ತಂಡವು ಮುಖ್ಯ ತರಬೇತುದಾರ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಬಿ.ಅರುಣ್, ಫೀಲ್ಡಿಂಗ್ ಕೋಚ್ ಶ್ರೀಧರ್ ಹಾಗೂ ಫಿಸಿಯೊ ನಿತಿನ್ ಪಟೇಲ್ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್(ಪ್ರತ್ಯೇಕ ವಾಸ) ಮಾಡಲಾಗಿದೆ. ಎಲ್ಲರೂ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದಾರೆ. ತಂಡದ ಹೋಟೆಲ್‌ನಲ್ಲಿಯೇ ಅವರು ಇರುತ್ತಾರೆ. ವೈದ್ಯಕೀಯ ತಂಡದಿಂದ ದೃಢೀಕರಿಸುವವರೆಗೂ ಟೀಂ ಇಂಡಿಯಾದೊಂದಿಗೆ ಅವರು ಸಂಪರ್ಕ ಹೊಂದುವಂತಿಲ್ಲ" ಎಂದು ಬಿಸಿಸಿಐ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.