ಲಂಡನ್: ಇಲ್ಲಿನ ಲೀಡ್ಸ್ ಮೈದಾನದಲ್ಲಿ ಇಂದು ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗತ್ತಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲಿದೆ.
ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಅಭಿಯಾನ ಮುಂದುವರೆಸಿರುವ ಟೀಂ ಇಂಡಿಯಾ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನ ಎದುರಿಸಲಿದೆ. ಭರ್ಜರಿ ಫಾರ್ಮ್ನಲ್ಲಿರುವ ಟೀಂ ಇಂಡಯಾ ಆಟಗಾರರು ಇಂದಿನ ಪಂದ್ಯದಲ್ಲಿ ಜಯಸಾಧಿಸಿ ಪಾಂಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದ್ದಾರೆ.
2011ರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಶ್ರೀಲಂಕಾ ತಂಡ 2015 ಮತ್ತು 2019 ರಲ್ಲಿ ಸೆಮಿಫೈನಲ್ ಹಂತಕ್ಕೇರುವಲ್ಲಿ ವಿಫಲವಾಗಿದೆ. ಶ್ರೀಲಂಕಾ ತಂಡದ 2 ಪಂದ್ಯಗಳು ಮಳೆಯಿಂದ ರದ್ದಾಗಿದ್ದು ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಈ ಗಾಗಲೆ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿರುವ ಲಂಕಾ ತಂಡ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಕ್ತಾಯಗೊಳಿಸಲು ತೀರ್ಮಾನಿಸಿದೆ.
ವಿಶ್ವಕಪ್ನಲ್ಲಿ ಲಂಕನ್ನರೇ ಮೇಲುಗೈ:
ವಿಶ್ವಕಪ್ ಟೂರ್ನಿಯಲ್ಲಿ ಇಲ್ಲಿಯವರೆಗೆ ಶ್ರೀಲಂಕಾ ಮತ್ತು ಭಾರತ 8 ಬಾರಿ ಮುಖಾಮುಖಿಯಾಗಿವೆ. ಎಂಟರಲ್ಲಿ ಶ್ರೀಲಂಕಾ 4 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ಟೀಂ ಇಂಡಿಯಾ 3 ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ್ದು, ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.