ಬರ್ಮಿಂಗ್ಹ್ಯಾಮ್:ವಿಶ್ವಕಪ್ನಲ್ಲಿ ಇಂದು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್ ಮ್ಯಾಚ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸೆಮಿಫೈನಲ್ ತಲುಪಲು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ಇಂಗ್ಲೆಂಡ್ ಸೋಲೇ ಇಲ್ಲದ ಭಾರತ ತಂಡವನ್ನು ಎದುರುಗೊಳ್ಳುತ್ತಿದೆ.
ವಿಶ್ವಕಪ್ ಟೂರ್ನಿ ಸದ್ಯ ಬಹುಮುಖ್ಯ ಘಟ್ಟ ತಲುಪಿದ್ದು, ಸೆಮಿಫೈನಲ್ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಸೆಮೀಸ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದು, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ಶ್ರೀಲಂಕಾ ತಂಡಗಳು ನಾಲ್ಕರ ಘಟ್ಟ ತಲುಪಲು ಹವಣಿಸುತ್ತಿವೆ. ಇನ್ನು ಅಗ್ರ ಶ್ರೇಯಾಂಕದೊಂದಿಗೆ ಟೂರ್ನಿ ಆರಂಭಿಸಿ ಆರಂಭದಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ನಂತರ ಶ್ರೀಲಂಕಾ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತು ಸೆಮೀಸ್ ರೇಸ್ನಲ್ಲಿ ಹಿಂದೆ ಬಿದ್ದಿದೆ.
ಸದ್ಯ ಇಂಗ್ಲೆಂಡ್ ಸೆಮಿಫೈನಲ್ ತಲುಪಲು ಇಂದು ಭಾರತ ವಿರುದ್ಧ ನಡೆಯುವ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮತ್ತೊಂದು ಕಡೆ ಗೆಲುವಿನ ಓಟ ಮುಂದುವರೆಸಲು ನಿರ್ಧರಿಸಿರುವ ಭಾರತ ತಂಡ ಸೆಮಿಫೈನಲ್ ತಲುಪುವ ತವಕದಲ್ಲಿದೆ.
ವಿಶ್ವಕಪ್ನಲ್ಲಿ ಇಬ್ಬರದ್ದೂ ಸಮಬಲ:
ವಿಶ್ವಕಪ್ನಲ್ಲಿ ಭಾರತ ಇಂಗ್ಲೆಂಡ್ ಇದುವರೆಗೂ 7 ಬಾರಿ ಮುಖಾಮುಖಿಯಾಗಿದ್ದು, 3 ಬಾರಿ ಇಂಗ್ಲೆಂಡ್ ಮತ್ತು 3 ಬಾರಿ ಭಾರತ ಜಯಸಾಧಿಸಿವೆ. ಮತ್ತೊಂದು ಪಂದ್ಯ ಟೈ ಮಾಡಿಕೊಳ್ಳುವ ಮೂಲಕ ಸಮಬಲ ಸಾಧಿಸಿವೆ.