ಬರ್ಮಿಂಗ್ಯಾಮ್: ಪ್ರಸಕ್ತ ವಿಶ್ವಕಪ್ನಲ್ಲಿ ಅಮೋಘ ಫಾರ್ಮ್ ಮುಂದುವರಿಸಿರುವ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮ ಟೂರ್ನಿಯಲ್ಲಿ ನಾಲ್ಕನೇ ಶತಕ (104) ದಾಖಲಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದ್ದಾರೆ. ಅಲ್ಲದೇ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿಹೆಚ್ಚು ಅಂದರೆ ನಾಲ್ಕು ಶತಕ ಬಾರಿಸಿದ ಭಾರತದ ಮೊದಲ ಆಟಗಾರ ಎಂಬ ಹಿರಿಮೆಗೆ ರೋಹಿತ್ ಪಾತ್ರರಾದರು.
ಭಾರತದ ಪರ ಯಾವುದೇ ಆಟಗಾರ 4 ಶತಕ ಗಳಸಿಲ್ಲ. ಈ ಹಿಂದೆ 2015ರ ವಿಶ್ವಕಪ್ನಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ 4 ಶತಕ ಬಾರಿಸಿದ್ದರು. ಇದೀಗ ರೋಹಿತ್ ಕೂಡ ಈ ಸಾಧನೆ ಮಾಡಿದ್ದು, ಒಟ್ಟಾರೆ ಏಕದಿನ ಕ್ರಿಕೆಟ್ನಲ್ಲಿ 26ನೇ ಶತಕವಾಗಿದೆ. ಬಾಂಗ್ಲಾ ಬೌಲರ್ಗಳ ಬೆವರಿಳಿಸಿದ ಹಿಟ್ಮ್ಯಾನ್ ರಾಹುಲ್ ಜೊತೆ ಮೊದಲ ವಿಕೆಟ್ಗೆ 180 ರನ್ಗಳ ಭರ್ಜರಿ ಜೊತೆಯಾಟವಾಡಿದರು.
ಇನ್ನು ಒಟ್ಟಾರೆ ವಿಶ್ವಕಪ್ ಟೂರ್ನಿಗಳಲ್ಲಿ ಶತಕ ದಾಖಲಿಸಿದವರ ಪಟ್ಟಿಯಲ್ಲಿ ರೋಹಿತ್ ಮೂರನೇ ಸ್ಥಾನ ಅಲಂಕರಿಸಿದ್ದಾರೆ. 6 ಶತಕ ಗಳಿಸಿರುವ ಸಚಿನ್ ಮೊದಲಿಗರಾಗಿದ್ದರೆ, ಪಾಂಟಿಂಗ್ ಹಾಗೂ ಸಂಗಕ್ಕರ ತಲಾ 5 ಸೆಂಚುರಿ ಬಾರಿಸಿದ್ದಾರೆ.