ನವದೆಹಲಿ:ಭಾರತ ತಂಡದ ಆಲ್ರೌಂಡರ್ ವಿಜಯ್ ಶಂಕರ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು, ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಬೀಸಲು ಸಿದ್ದರಾಗಿದ್ದರೆ. ಇದೇ ಸಮಯದಲ್ಲಿ ತನ್ನ ಕ್ರಿಕೆಟ್ ವೃತ್ತಿ ಜೀವನದ ಅತಿ ಮುಖ್ಯ ಟರ್ನಿಂಗ್ ಪಾಯಿಂಟ್ ಏನೆಂಬುದನ್ನ ತಿಳಿಸಿದ್ದಾರೆ.
ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ವಿಶ್ವಕಪ್ ಟೀಂಗೆ ಆಯ್ಕೆಯಾಗಿದ್ದಾರೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವಿಜಯ್ ಶಂಕರ್, ಒಂದು ನೋ ಬಾಲ್ನಿಂದ ತನ್ನ ಕ್ರಿಕೆಟ್ ವೃತ್ತಿ ಜೀವನ ಬದಲಾಯಿತು ಎಂದು ಹೇಳಿಕೊಂಡಿದ್ದಾರೆ.
ರಣಜಿಯಲ್ಲಿ ತಮಿಳುನಾಡು ತಂಡವನ್ನ ಪ್ರತಿನಿಧಿಸುತ್ತಿದ್ದೆ. ಒಂದು ಪಂದ್ಯದಲ್ಲಿ ನಾನು ಮತ್ತು ನಮ್ಮ ತಂಡದ ನಾಯಕ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೆವು. ಆದ್ರೆ ಇಬ್ಬರು ರನೌಟ್ ಆದಕಾರಣ ನಾವು ಆ ಪಂದ್ಯದಲ್ಲಿ ಸೋಲು ಅನುಭವಿಸಿದೆವು. ಪಂದ್ಯದ ನಂತರ ನಾಯಕ ಮತ್ತು ಕೋಚ್ ಏನೂ ಹೇಳಲಿಲ್ಲ. ಆದರೆ ಬೇರೆಯವರೆಲ್ಲ ಇದೇ ಈತನ ಕೊನೆಯ ಪಂದ್ಯ ಮತ್ತೆ ತಮಿಳುನಾಡು ತಂಡದಲ್ಲಿ ಈತನಿಗೆ ಸ್ಥಾನ ಸಿಗಲ್ಲ ಎಂದು ಮಾತನಾಡಲು ಶುರು ಮಾಡಿದ್ರು.
ನಂತರ ಚೆನ್ನೈನಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ನಾನು 5ನೇ ಸ್ಥಾನದಲ್ಲಿ ಬ್ಯಾಟ್ ಬೀಸಲು ಕಣಕ್ಕಿಳಿದೆ. ಮುಂಬೈ ತಂಡದ ಪರ ಬೌಲಿಂಗ್ ಮಾಡುತ್ತಿದ್ದ ಶಾರ್ದೂಲ್ ಠಾಕೂರ್ ಎಸೆದ ಬಾಲ್ಗೆ ಕ್ಲೀನ್ ಬೌಲ್ಡ್ ಆದೆ. ಆದ್ರೆ ಅದು ನೋಬಾಲ್ ಆಗಿತ್ತು. ಹೀಗಾಗಿ ಒಂದು ಲೈಫ್ ಪಡೆದ ನಾನು ಅಂದಿನ ಪಂದ್ಯದಲ್ಲಿ 95 ರನ್ ಸಿಡಿಸಿದೆ.
ಒಂದು ವೇಳೆ ಶಾರ್ದೂಲ್ ಠಾಕೂರ್ ನೋ ಬಾಲ್ ಎಸೆಯಲಿಲ್ಲ ಎಂದಿದ್ದರೆ ಬಹುಶಃ ಇತರರು ಮಾತನಾಡಿದಂತೆ ನಾನು ಮತ್ತೆ ತಮಿಳುನಾಡು ತಂಡದ ಪರ ಆಡುತ್ತಿರಲಿಲ್ಲ. ಆ ನೋ ಬಾಲ್ ನನ್ನ ಕ್ರಿಕೆಟ್ ಜೀವನವನ್ನೇ ಬದಲಿಸಿತು. ಶಾರ್ದೂಲ್ ಕೂಡ ಪಂದ್ಯ ಮುಗಿದ ನಂತರ ನಾನೇ ನಿನಗೆ ಜೀವನ ನೀಡಿದ್ದು ಎಂದು ಹೇಳಿದ್ದ, ಅಂತ ವಿಜಯ್ ಹೇಳಿಕೊಂಡಿದ್ದಾರೆ.