ಬರ್ಮಿಂಗ್ಹ್ಯಾಮ್:ನಿನ್ನೆ ನಡೆದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ ಪಡೆ ಸೋಲು ಕಂಡಿದ್ದು ಪಾಕ್ ಕ್ರಿಕೆಟ್ನ ಮಾಜಿ ಆಟಗಾರರಿಗೆ ಬೇಸರ ತರಿಸಿದೆ.
ಟೀಂ ಇಂಡಿಯಾ ನಿನ್ನೆ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಪಾಕಿಸ್ತಾನದ ಸೆಮಿ ಫೈನಲ್ ಹಾದಿ ಸುಗಮವಾಗುತ್ತಿತ್ತು. ಆದ್ರೆ ಕೊಹ್ಲಿ ಪಡೆ 31 ರನ್ಗಳಿಂದ ಸೊಲು ಕಂಡಿದ್ದು, ಪಾಕ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಪಾಕ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಟೀಂ ಇಂಡಿಯಾ ಸೋಲಿಗೆ ಟ್ವಿಟ್ಟರ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 'ಭಾರತ ತಂಡ ಇನ್ನೂ ಉತ್ತಮವಾಗಿ ಆಡಬಹುದಿತ್ತು ಮೊದಲ 10 ಓವರ್ ಮತ್ತು ಕಡೆಯಲ್ಲಿ 5 ವಿಕೆಟ್ ಇದ್ದಾಗಲೂ ಉತ್ತಮ ಪ್ರದರ್ಶನ ತೋರಬಹುದಿತ್ತು. ನಮ್ಮ ಭರವಸೆ ಈಗ ನ್ಯೂಜಿಲೆಂಡ್ ಮೇಲಿದೆ ಎಂದಿದ್ದಾರೆ.
ಅಲ್ಲದೆ ತಮ್ಮ ಯೂಟ್ಯೂಬ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಅಖ್ತರ್ ' ಪಾಕಿಸ್ತಾನದ ಪ್ರತಿಯೊಬ್ಬ ಅಭಿಮಾನಿ ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥನೆ ಮಾಡಿದ್ದರು. ಆದರೆ ನಮ್ಮ ಪ್ರಾರ್ಥನೆ ಭಾರತಕ್ಕೆ ತಲುಪಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ಸೋಲಿನ ಬಗ್ಗೆ ಟ್ವೀಟ್ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಕಾರ್ ಯುನಿಸ್, 'ನೀನು ಜೀವನದಲ್ಲಿ ಏನು ಮಾಡಿದ್ದೀಯ ಎಂಬುದು ನೀನು ಯಾರು ಎಂಬುದನ್ನ ನಿರ್ಧರಿಸುತ್ತದೆ. ಪಾಕಿಸ್ತಾನ ಸೆಮಿಪೈನಲ್ಗೆ ಹೋಗುತ್ತದೋ ಬಿಡುತ್ತದದೋ ನನಗೆ ಅದರ ಚಿಂತೆ ಇಲ್ಲ. ಆದರೆ ಕೆಲವು ಚಾಂಪಿಯನ್ನರ ಕ್ರೀಡಾಪಟುತ್ವ ಪರೀಕ್ಷೆಗೆ ಒಳಪಟ್ಟಿತ್ತು ಅದರಲ್ಲಿ ಅವರು ಸೋಲು ಕಂಡಿದ್ದಾರೆ' ಎಂದು ಟೀಂ ಇಂಡಿಯಾ ಆಟಗಾರರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.