ಲಂಡನ್:ಕನ್ನಡಿಗ ಕೆ.ಎಲ್.ರಾಹುಲ್ (108) ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (113) ಅವರ ಆಕರ್ಷಕ ಶತಕಗಳ ನೆರವಿನಿಂದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯ 2ನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 95 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಕಾರ್ಡಿಫ್ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ, ಟೀಂ ಇಂಡಿಯಾವನ್ನ ಬ್ಯಾಟಿಂಗ್ಗೆ ಆಹ್ವಾನಿಸಿತು. ಇನ್ನು ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭಿಕ ಆಟಗಾರರು ರನ್ ಗಳಿಸಲು ಪರದಾಡಿದರು. ರೋಹಿತ್ ಶರ್ಮಾ 42 ಎಸೆತಗಳಲ್ಲಿ 19 ಹಾಗೂ ಧವನ್ 9 ಎಸೆತಗಳಲ್ಲಿ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ 47 ಹಾಗೂ ವಿಜಯ್ ಶಂಕರ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗೆ ತಂಡ 102 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ರಾಹುಲ್ ಹಾಗೂ ಧೋನಿ 5ನೇ ವಿಕೆಟ್ಗೆ 164 ರನ್ಗಳ ಜೊತೆಯಾಟದ ಮೂಲಕ ಭರ್ಜರಿ ಶತಕಗಳನ್ನು ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಧೋನಿ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 73 ಎಸೆತಗಳಲ್ಲಿ ಶತಕ ಬಾರಿಸಿದರೆ, ರಾಹುಲ್ 99 ಬಾಲ್ಗಳಲ್ಲಿ 108 ರನ್ ಗಳಿಸಿ ಔಟ್ ಆದರು. ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ಗಳ ಬೃಹತ್ ಮೊತ್ತ ಪೇರಿಸಿತು.