ಇಸ್ಲಾಮಾಬಾದ್: ಭಾನುವಾರದ ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯದಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶಿಸಿದ ಪಾಕ್ ಬೌಲರ್ ಹಸನ್ ಅಲಿ ವಿರುದ್ಧ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೆಂಡಾಮಂಡಲರಾಗಿದ್ದಾರೆ.
ನೀನು ವಾಘಾ ಗಡಿಯಲ್ಲಿ ಹಾರಾಡುತ್ತಿದ್ದೆ ಅಲ್ಲವೇ..? ಈಗ ಮೈದಾನದಲ್ಲಿ ನಿನ್ನ ಶೌರ್ಯ ತೋರಿಸು.. ಒಂದು ಪಂದ್ಯದಲ್ಲಿ ಆರೇಳು ವಿಕೆಟ್ ಕಿತ್ತು ಅಬ್ಬರಿಸಿದರೆ ಸಹ್ಯ ಎನ್ನಬಹುದು. ಆದರೆ 80ಕ್ಕೂ ಅಧಿಕ ರನ್ ನೀಡುವ ವೇಳೆ ಮನಸ್ಥಿತಿ ಯಾವ ರೀತಿ ಇತ್ತು ಎನ್ನುವುದು ನನಗೆ ತಿಳಿದಿಲ್ಲ ಎಂದು ಶೋಯೆಬ್ ಅಖ್ತರ್ ವಿಡಿಯೋ ಒಂದರಲ್ಲಿ ಖಾರವಾಗಿ ಮಾತನಾಡಿದ್ದಾರೆ.
ತಂಡ ಸೋಲು ಕಾಣಲು ನಾನು ಕಾರಣವಲ್ಲ: ಮೈದಾನದಲ್ಲೇ ಸಹ ಆಟಗಾರರ ವಿರುದ್ಧ ಹರಿಹಾಯ್ದ ಅಮೀರ್!
ಕೇವಲ ಟಿ-20 ಬೌಲರ್ ಆಗಬೇಕು, ಪಾಕ್ ಪ್ರೀಮಿಯರ್ ಲೀಗ್ ಆಡಬೇಕು ಎನ್ನುವ ಯೋಚನೆ ಹಸನ್ ಅಲಿಯಲ್ಲಿರಬೇಕು. ಆದರೆ ಪಾಕಿಸ್ತಾನ ತಂಡ ಆತನ ಪ್ರದರ್ಶನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಹಸನ್ ಅಲಿ ಬೌಲಿಂಗ್ ಪೇಸ್, ಸ್ವಿಂಗ್ ಏನೇನೂ ಇಲ್ಲ ಎಂದು ಅಖ್ತರ್ ಯುಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.
ಭಾರತದ ವಿರುದ್ಧದ ಪಂದ್ಯದಲ್ಲಿ ಹಸನ್ ಅಲಿ 9 ಓವರ್ನಲ್ಲಿ ಒಂದು ವಿಕೆಟ್ ಕಿತ್ತರೂ ಸಹ ಬರೋಬ್ಬರಿ 84 ರನ್ ನೀಡಿ ದುಬಾರಿಯಾದರು. ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ನೀಡಿದ ಪಾಕ್ ಬೌಲರ್ ಎನ್ನುವ ಕೆಟ್ಟ ದಾಖಲೆ ಹಸನ್ ಅಲಿ ಪಾಲಾಯಿತು.
ಏನಿದು ವಾಘಾ ಗಡಿ ವಿಚಾರ...?
ಕಳೆದ ವರ್ಷ ವಾಘಾ ಗಡಿಯಲ್ಲಿ ಭಾರತ- ಪಾಕಿಸ್ತಾನ ಸೈನಿಕರು ಪರಸ್ಪರ ಸೌಹಾರ್ದತೆ ಸಾರುವ ಸಲುವಾಗಿ ಧ್ವಜ ಗೌರವ ಸಲ್ಲಿಸಿದ್ದರು. ಈ ವೇಳೆ ಇದೇ ಹಸನ್ ಅಲಿ ಸೈನಿಕರ ಮಧ್ಯೆ ಹೋಗಿ ಭಾರತೀಯ ಯೋಧರನ್ನು ಕಿಚಾಯಿಸುವ ರೀತಿಯಲ್ಲಿ ವರ್ತಿಸಿದ್ದರು. ಉಭಯ ದೇಶಗಳ ದೇಶಗಳ ಸೌಹಾರ್ದ ಕಾರ್ಯಕ್ರಮದಲ್ಲಿನ ಹಸನ್ ಅಲಿ ವರ್ತನೆ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಇದೇ ವಿಚಾರವನ್ನು ಸದ್ಯ ಅಖ್ತರ್ ತಮ್ಮ ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾರೆ.