ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಗೆದ್ದಿರುವ ಪಾಕಿಸ್ತಾನ ತಂಡ ಸೆಮಿ ಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಪಾಕ್ ಸೆಮಿಫೈನಲ್ಗೆ ತಲುಪಬೇಕಾದರೆ ತಮ್ಮ ತಂಡದ ಜೊತೆ ಬೇರೆ ತಂಡದ ಗೆಲುವನ್ನೂ ಆಧರಿಸಿದೆ.
ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ರೆ ಪಾಕ್ ಸೆಮಿಫೈನಲ್ ಹಾದಿ ಸುಗಮವಾಗುತಿತ್ತು. ಆದರೆ, ಇಂಗ್ಲೆಂಡ್ ತಂಡ ಗೆಲುವು ಸಾಧಿಸಿದ್ದು ಪಾಕಿಸ್ತಾನಕ್ಕೆ ನಿರಾಸೆಯುಂಟಾಗಿದೆ. ಟೀಂ ಇಂಡಿಯಾ ಗೆಲುವಿಗಾಗಿ ಪ್ರಾರ್ಥನೆ ಮಾಡುತ್ತಿದ್ದ ಪಾಕ್ ಅಭಿಮಾನಿಗಳು ಇದೀಗ ಕಿವೀಸ್ ಪಡೆಯ ಗೆಲುವಿಗಾಗಿ ಪಾರ್ಥನೆ ಮಾಡುತ್ತಿದ್ದಾರೆ.
ಇಂದು ನಡೆಯುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ವಿಲಿಯಮ್ಸನ್ ಪಡೆಗೆ ಪಾಕ್ ಅಭಿಮಾನಿಗಳು ಬೆಂಬಲ ನೀಡುತ್ತಿದ್ದು, ಕಿವೀಸ್ ತಂಡದ ಗೆಲುವಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ. ಪಾಯಿಂಟ್ ಪಟ್ಟಿಯಲ್ಲಿ ಒಟ್ಟು 10 ಅಂಕಗಳೊಂದಿಗೆ ಇಂಗ್ಲೆಂಡ್ ತಂಡ ನಾಲ್ಕನೇ ಸ್ಥಾನದಲ್ಲಿದ್ದು, 9 ಅಂಕ ಗಳಿಸಿರುವ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿ ಫೈನಲ್ಗೆ ಲಗ್ಗೆ ಇಡಬಹುದು ಎಂಬುದು ಪಾಕ್ ಲೆಕ್ಕಾಚಾರ.
ಈ ಹಿಂದೆ ಭಾರತ ತಂಡದ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿದ್ದಾಗ ಟ್ವೀಟ್ ಮಾಡಿದ ಪಾಕ್ನ ಮಾಜಿ ವೇಗಿ ಶೋಯೆಬ್ ಅಖ್ತರ್, ನಮ್ಮ ಕೂಗು ಭಾರತಕ್ಕೆ ಕೇಳಲಿಲ್ಲ, ಈಗ ನಾವು ನ್ಯೂಜಿಲೆಂಡ್ ತಂಡವನ್ನ ಎದುರು ನೋಡುತ್ತಿದ್ದೇವೆ ಎಂದಿದ್ದರು.