ಸೌತಂಪ್ಟನ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 28ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ಬಲಿಷ್ಟ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ. ಇತ್ತ ಅಫ್ಘಾನಿಸ್ತಾನ ತಂಡ, ತಾನಾಡಿರುವ ಐದು ಪಂದ್ಯಗಳಲ್ಲಿ ಸೋಲು ಕಂಡಿದ್ದು ಟೂರ್ನಿಯಿಂದ ಹೊರಬಿದ್ದಿದೆ.
ಅಫ್ಘನ್ ತಂಡದ ಸ್ಪಿನ್ರಗಳಾದ ರಶೀದ್ ಖಾನ್, ಮೊಹಮದ್ ನಬಿ ಹಾಗೂ ಮುಜೀಬ್ ರೆಹಮಾನ್ ಹೇಳಿಕೊಳ್ಳುವಂತಹ ಬೌಲಿಂಗ್ ಪ್ರದರ್ಶನ ನೀಡುತ್ತಿಲ್ಲ. ಜತೆಗೆ ಬ್ಯಾಟಿಂಗ್ ವಿಭಾಗ ಕೂಡ ಮುಗ್ಗರಿಸಿದ್ದು, ತಂಡದ ನಿದ್ರೆ ಕೆಡಿಸಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಎಡಗಾಲಿನ ಹ್ಯಾಮ್ಸ್ಟ್ರಿಂಗ್ಗೆ ತುತ್ತಾಗಿರುವ ಭುವನೇಶ್ವರ್ ಕುಮಾರ್ ಬದಲು ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಧವನ್ ಬದಲು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿರುವ ರಿಷಭ್ ಪಂತ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ.
ತಂಡಗಳು
ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ವಿಜಯ್ ಶಂಕರ್, ಕೆ.ಎಲ್. ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ.
ಅಫ್ಘಾನಿಸ್ತಾನ:ಹಜರತುಲ್ಲ ಜಜೈ, ಗುಲ್ಬಾದಿನ್ ನಯಿಬ್ (ನಾಯಕ), ರಹಮತ್ ಷಾ, ಹಶ್ಮತುಲ್ಲಾ ಶಾಹಿದ್ದಿ, ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿ ಖಿಲ್, ನಜೀಬುಲ್ಲಾ ಜಾಡ್ರನ್, ರಶೀದ್ ಖಾನ್, ಅಫ್ತಬ್ ಅಲಮ್, ಮುಜೀಬ್ ಉರ್ ರಹಮಾನ್.