ಹೈದರಾಬಾದ್:ವಿಶ್ವಕಪ್ನಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದು, ವರ್ಲ್ಡ್ಕಪ್ ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ಮನನೊಂದು ನಿವೃತ್ತಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶ್ವಕಪ್ ಟೂರ್ನಿಯ 15 ಜನರ ತಂಡದಲ್ಲಿ ರಾಯುಡು ಆಯ್ಕೆಯಾಗುವ ವಿಶ್ವಾಸ ಹೊಂದಿದ್ದರು. ಆದರೆ, ಅಂತಿಮವಾಗಿ ಅಲ್ರೌಂಡರ್ ವಿಜಯ್ ಶಂಕರ್ಗೆ ಬಿಸಿಸಿಐ ಮಣೆ ಹಾಕಿತು. ಹೀಗಾಗಿ ರಾಯುಡು ಮಹತ್ವದ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.
ಟೀಂ ಇಂಡಿಯಾದಲ್ಲಿ ತಮ್ಮ ಹೆಸರು ಇಲ್ಲದಿದ್ದರಿಂದ ಆಕ್ರೋಶಗೊಂಡಿದ್ದ ರಾಯುಡು, ವಿಶ್ವಕಪ್ ವೀಕ್ಷಣೆ ಮಾಡಲು ಹೊಸ 3ಡಿ ಕನ್ನಡಕ ಆರ್ಡರ್ ಮಾಡಿರುವೆ ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.
ಧವನ್ ಸ್ಥಾನಕ್ಕೆ ರಾಯುಡು ಆಯ್ಕೆ ಮಾಡುವಂತೆ ಗಂಭೀರ್ ಮನವಿ:
ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಮೂರು ವಾರಗಳ ಕಾಲ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಶಿಖರ್ ಧವನ್ ಜಾಗಕ್ಕೆ ಅಂಬಾಟಿ ರಾಯುಡು ಸೂಕ್ತ ಎಂದು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದರು. ಅಂಬಾಟಿ ರಾಯುಡು ಏಕದಿನ ಕ್ರಿಕೆಟ್ನಲ್ಲಿ 45 ರನ್ಗಳ ಆವರೇಜ್ ಹೊಂದಿದ್ದಾರೆ. ಅಂಥಾ ಆಟಗಾರನಿಗೆ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಕೊಡಲೇಬೇಕು. ಶಿಖರ್ ಸ್ಥಾನಕ್ಕೆ ರಾಯುಡು ಸೂಕ್ತ ವ್ಯಕ್ತಿ ಎಂದಿದ್ದರು.
ವಿಜಯ್ ಶಂಕರ್ ಔಟ್ ಆದ್ರೂ ರಾಯುಡುಗೆ ಸಿಗಲಿಲ್ಲ ಸ್ಥಾನ:
ಕಳೆದ 2 ದಿನಗಳ ಹಿಂದೆ ಗಾಯದ ಸಮಸ್ಯೆಯಿಂದ ಆಲ್ ರೌಡರ್ ವಿಜಯ್ ಶಂಕರ್ ವಿಶ್ವಕಪ್ ಟೂರ್ನಿಯಿಂದ ಔಟ್ ಆದ್ರು. ವಿಜಯ್ ಶಂಕರ್ ಸ್ಥಾನದಲ್ಲಿ ರಾಯುಡುಗೆ ಅವಕಾಶ ಸಿಗುವ ಭರವಸೆ ಇತ್ತು. ಆದ್ರೆ ಬಿಸಿಸಿಐ ಮಯಾಂಕ್ ಅಗರ್ವಾಲ್ಗೆ ಅವಕಾಶ ನೀಡಿತು.
ಈ ಮೊದಲು ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ರಾಯುಡು, ಇಬ್ಬರು ಆಟಗಾರರು ಟೂರ್ನಿಯಿಂದ ಔಟ್ ಆದ್ರೂ ಸ್ಥಾನ ಸಿಗದಿದ್ದಕ್ಕೆ ಮತ್ತಷ್ಟು ಮನನೊಂದು ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಟೀಂ ಇಂಡಿಯಾ ಪರ 55 ಏಕದಿನ ಕ್ರಿಕೆಟ್ ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧಶತಕ ಸೇರಿದಂತೆ 1,694 ರನ್ ಗಳಿಸಿದ್ದಾರೆ. ಆರು ಟಿ-20 ಪಂದ್ಯಗಳನ್ನ ಆಡಿರುವ ರಾಯುಡು ಒಟ್ಟು 42 ರನ್ ಗಳಿಸಿದ್ದಾರೆ.