ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಮಹೇಂದ್ರ ಸಿಂಗ್ ಧೋನಿ ಅವರ ನಿರ್ಧಾರದ ಹಿಂದೆ ಕೋವಿಡ್ -19 ಸಾಂಕ್ರಾಮಿಕದ ಪಾತ್ರವಿದೆ ಎಂದು ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಆರೋಗ್ಯ ಬಿಕ್ಕಟ್ಟಿನಿಂದಾಗಿ ಈ ವರ್ಷ ನಡೆಯಬೇಕಿದ್ದ ಟಿ-20 ವಿಶ್ವಕಪ್ 2022ಕ್ಕೆ ಮುಂದೂಡಲ್ಪಟ್ಟಿದೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ಆಯೋಜಿಸಿದ್ದ ಟಿ-20 ವಿಶ್ವಕಪ್‌ನಲ್ಲಿ ಧೋನಿ ಭಾಗವಹಿಸುವ ಬಗ್ಗೆ ಉಹಾಪೋಹಗಳಿದ್ದವು.
"ಧೋನಿ ಅವರ ನಿವೃತ್ತಿ ಬಹಳ ಆಘಾತಕಾರಿ ಸುದ್ದಿ. ಈ ನಿರ್ಧಾರದಲ್ಲಿ ಕರೋನಾ ಕೂಡ ಪಾತ್ರ ವಹಿಸಿದೆ ಎಂದು ನಾನು ಭಾವಿಸುತ್ತೇನೆ, ಇಲ್ಲದಿದ್ದರೆ ಧೋನಿ ಟಿ-20 ವಿಶ್ವಕಪ್ ಆಡಬಹುದಿತ್ತು" ಎಂದು ಚಹಾಲ್ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ಮುಂದುವರಿಸಲು ಧೋನಿ ಅವರಲ್ಲಿ ಸಾಮರ್ಥ್ಯ ಇದೆ ಎಂದು ಚಹಾಲ್ ಹೇಳಿದ್ದಾರೆ. 52 ಟೆಸ್ಟ್ ಮತ್ತು 42 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಹರಿಯಾಣ ಮೂಲದ 30 ವರ್ಷದ ಚಹಾಲ್. ಧೋನಿ ಇನ್ನೂ ಆಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಧೋನಿ ಅವರ ಕಾರಣದಿಂದಾಗಿ ಕುಲ್ದೀಪ್ ಯಾದವ್ ಮತ್ತು ನಾನು ಯಶಸ್ವಿಯಾಗಿದ್ದೇವೆ. ವಿಕೆಟ್ ಹಿಂಭಾಗದಿಂದ ನಾವು ಅವರಿಂದ ಸಾಕಷ್ಟು ಸಹಾಯವನ್ನು ಪಡೆಯುತ್ತಿದ್ದೆವು. ಧೋನಿ ಅಲ್ಲಿದ್ದರೆ, ನನ್ನ ಶೇಕಡಾ 50 ರಷ್ಟು ಕೆಲಸಗಳು ಪುರ್ಣವಾದಂತೆ ಎಂದು ಚಹಾಲ್ ಹೇಳಿಕೊಂಡಿದ್ದಾರೆ.