ಮುಂಬೈ: ನನ್ನ ಮಗ ಸೇರಿದಂತೆ ಹಲವು ಕ್ರಿಕೆಟಿಗರ ವೃತ್ತಿ ಜೀವನ ಮೈದಾನದಲ್ಲಿ ಅಂತ್ಯಗೊಳ್ಳದಂತಾಗಲು ಆತನೇ ಕಾರಣ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಹೆಸರೇಳದೆ ಧೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಕಂಡಂತಹ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಕಳೆದೆರಡು ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ಅವಕಾಶ ಸಿಗದೆ ಬೇಸರದಲ್ಲಿ ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಉತ್ತಮ ಬೀಳ್ಕೊಡುಗೆ ಸಿಗಲಿಲ್ಲ ಎಂಬ ಕೊರಗು ಅವರಿಗೂ ಇದ್ದದ್ದೂ ನಿಜ, ಅದೇ ರೀತಿ ಅವರ ತಂದೆಗೂ ಮಗನ ಕ್ರಿಕೆಟ್ ಜೀವನದ ಕೊನೆಯ ಪಂದ್ಯ ಅವಿಸ್ಮರಣೀಯವಾಗಲಿಲ್ಲ ಎಂಬ ಕೊರಗಿದ್ದು, ಇದಕ್ಕೆ ಕಾರಣ ಆಗಿದ್ದು ಒಬ್ಬ ವ್ಯಕ್ತಿ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ವಿಶ್ವಕಪ್ ನಡೆಯುತ್ತಿದೆ, ಇಡೀ ದೇಶವೇ ಭಾರತ ತಂಡವನ್ನು ಬೆಂಬಲಿಸುತ್ತಿದೆ. ಈ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ಭಾರತ ಕ್ರಿಕೆಟ್ನಲ್ಲಿ ರಾಜಕೀಯ ನಡೆಸುತ್ತಿರುವ ಆತನ ಹೆಸರನ್ನು ಹೇಳುವುದು ಸರಿಯಲ್ಲ. ವಿಶ್ವಕಪ್ ಮುಗಿದ ಮೇಲೆ ಆತನ ರಾಜಕೀಯ ಬಯಲಾಟವನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.
ಆತನೊಬ್ಬನಿಂದಲೇ ವಿವಿಎಸ್ ಲಕ್ಷ್ಮಣ್, ನಂತರ ಸೆಹ್ವಾಗ್, ಗಂಭೀರ್ ಇದೀಗ ನನ್ನ ಮಗನ ಕ್ರಿಕೆಟ್ ಜೀವನ ಅಂತ್ಯಗೊಂಡಿದೆ. ನನ್ನ ಮಗನಿಗೆ ಕೊನೆಯ ಪಂದ್ಯವಾಡುವ ಅವಕಾಶವನ್ನು ನೀಡುತ್ತೇವೆಂದ ಬಿಸಿಸಿಐ, ಬೇಕಂತಲೇ ಯೋ ಯೋ ಟೆಸ್ಟ್ನಲ್ಲಿ ಫೇಲಾಗುವಂತೆ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ಒಬ್ಬನೇ ಎಂದು ಧೋನಿ ವಿರುದ್ಧ ಕಿಡಿಕಾರಿದ ಯೋಗರಾಜ್, ಸತ್ಯ ಹೇಳಲು ನನಗೆ ಯಾರ ಭಯವೂ ಇಲ್ಲ, ನಾನು ಸತ್ಯ ಹೇಳುವಾಗ ನನ್ನ ಮುಂದೆ ಮಾತನಾಡಲು ಯಾರೂ ಬರುವುದಿಲ್ಲ, ಸದ್ಯಕ್ಕೆ ವಿಶ್ವಕಪ್ ಮುಗಿಯಲಿ ಮುಂದೆ ಇದಕ್ಕೆಲ್ಲಾ ಕಾರಣ ಯಾರು ಎಂದು ಬಹಿರಂಗ ಪಡಿಸುವೆ ಎಂದಿದ್ದಾರೆ.