ಮುಂಬೈ: 2020ರ ಆವೃತ್ತಿಯ ಐಪಿಎಲ್ನಲ್ಲಿ ಆಡಿರುವ 9 ಪಂದ್ಯಗಳಲ್ಲಿನ ಕೇವಲ ಮೂರು ಪಂದ್ಯ ಗೆದ್ದಿರುವ ಪಂಜಾಬ್ ತಂಡ ಫೈನಲ್ ಪ್ರವೇಶಿಸಲಿದೆ ಎಂದು ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
ಮುಂಬೈ ವಿರುದ್ಧ ಐತಿಹಾಸಿಕ 2 ಸೂಪರ್ ಓವರ್ಗಳ ಪಂದ್ಯದಲ್ಲಿ ಗೆದ್ದ ನಂತರ ಪಂಜಾಬ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಈಗಾಗಲೆ ಡೆಲ್ಲಿ, ಮುಂಬೈ ಹಾಗೂ ಬೆಂಗಳೂರು ತಂಡಗಳು ಪ್ಲೇ ಆಪ್ಗೆ ತುಂಬಾ ಹತ್ತಿರವಾಗಿವೆ. ಹೀಗಾಗಿ ಉಳಿದ ಒಂದು ಸ್ಥಾನಕ್ಕೆ ಉಳಿದ 5 ತಂಡಗಳ ಜೊತೆ ಪೈಪೋಟಿ ನಡೆಸಬೇಕಾಗಿದೆ.
ಆದರೆ, ಯುವರಾಜ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ಲೇ ಆಫ್ ತಲುಪಲಿದೆ ಮತ್ತು ಮುಂಬೈ ಅಥವಾ ಡೆಲ್ಲಿ ವಿರುದ್ಧ ಫೈನಲ್ ಆಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಿಚಿತ್ರ ಎಂದರೆ ಯುವಿ ಲಿಸ್ಟ್ನಲ್ಲಿ ಆರ್ಸಿಬಿ ತಂಡ ಅವಕಾಶ ಪಡೆದಿಲ್ಲ. ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಸೂಪರ್ ಓವರ್ ಪಂದ್ಯದ ನಂತರ ಯುವರಾಜ್ ಸಿಂಗ್ ತಮ್ಮ ಟ್ವೀಟ್ನಲ್ಲಿ ಈ ರೀತಿ ಹೇಳಿದ್ದಾರೆ.
" ಈ ಪಂದ್ಯದ ಗೇಮ್ ಚೇಂಜರ್ ನಿಕೋಲಸ್ ಪೂರನ್! ಬ್ಯಾಟ್ ಅನ್ನು ಸುಂದರವಾಗಿ ಬೀಸುತ್ತಿದ್ದಾರೆ. ನೋಡಲು ಅದ್ಭುತವಾಗಿದೆ. ನನ್ನೊಳಗಿನ ಆಟವನ್ನು ನೆನಪಿಸಿದ್ದಾರೆ. ಗೇಮ್ ಆನ್! ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇಆಫ್‌ಗೆ ತಲುಪಲಿದೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಯಾವುದಾದರೂ ಒಂದು ತಂಡದ ವಿರುದ್ಧ ಫೈನಲ್‌ನಲ್ಲಿ ಆಡಲಿದೆ ," ಎಂದು ಭಾರತ ತಂಡದ ಮಾಜಿ ಆಲ್‌ರೌಂಡರ್ ಟ್ವೀಟ್ ಮಾಡಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ 14 ಅಂಕ ಹಾಗೂ ಮುಂಬೈ ಮತ್ತು ಆರ್ಸಿಬಿ 12 ಅಂಕಗಳೊಂದಿಗೆ 2 ಮತ್ತು 3ನೇ ಸ್ಥಾನದಲ್ಲಿವೆ. ಪಂಜಾಬ್ ಪ್ಲೇ ಆಫ್ ತಲುಬೇಕೆಂದರೆ ಬೇರೆ ತಂಡಗಳ ಫಲಿತಾಶಗಳನ್ನು ಅವಲಂಬಿಸಬೇಕಾಗಿದೆ.