ಬ್ರಾಂಪ್ಟನ್:ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ-20 ಟೂರ್ನಮೆಂಟ್ನಲ್ಲಿ ಹಣ ನೀಡದೆ ಬಸ್ ಹತ್ತೋದಿಲ್ಲ ಎಂದು ಆಟಗಾರರು ಪಟ್ಟುಹಿಡಿದ ಘಟನೆ ನಡೆದಿದೆ.
ನಿನ್ನೆ ಟೊರೆಂಟೋ ನ್ಯಾಷನಲ್ಸ್ ಮತ್ತು ಮಾಂಟ್ರಿಯಲ್ ಟೈಗರ್ಸ್ ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ಬರಬೇಕಿದ್ದ ಆಟಗಾರರು ತಮಗೆ ನೀಡಬೇಕಿದ್ದ ವೇತನ ಕೊಡಬೇಕು. ಅಲ್ಲಿಯವರೆಗೆ ಬಸ್ ಹತ್ತುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಎಂದು ಕ್ರೀಡಾ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.
ಪಂದ್ಯ ಪ್ರಾರಂಭವಾಗಬೇಕಿದ್ದ ಸಮಯ ಮೀರಿ 75 ನಿಮಿಷ ಕಳೆದರೂ ಟೊರೆಂಟೋ ನ್ಯಾಷನಲ್ಸ್ ಮತ್ತು ಮಾಂಟ್ರಿಯಲ್ ಟೈಗರ್ಸ್ ತಂಡದ ಯಾವೊಬ್ಬ ಆಟಗಾರರು ಕೂಡ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗೆ ಪಟ್ಟು ಹಿಡಿದು ಕೂತ ಟೊರೆಂಟೋ ತಂಡದಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಇದ್ದಾರೆ.
ಅಂತಿಮವಾಗಿ ನಿಗದಿತ ಸಮಯಕ್ಕೆ ಪಂದ್ಯ ಪ್ರಾರಂಭವಾಗದೆ ತಡವಾಗಿ ಆರಂಭವಾಯಿತು. ಆದರೆ ವೇತನದ ಆರೋಪವನ್ನ ತಳ್ಳಿಹಾಕಿದ್ದು, ತಾಂತ್ರಿಕ ಕಾರಣಗಳಿಂದ ಪಂದ್ಯ ತಡವಾಗಿ ಆರಂಭವಾಯಿತು ಎಂದು ಗ್ಲೋಬಲ್ ಟಿ-20 ತನ್ನ ಅಧಿಕೃತ ಟ್ವಿಟರ್ನಲ್ಲಿ ಟ್ವೀಟ್ ಮಾಡಿದೆ.