ಹೈದರಾಬಾದ್:ಯಜುವೇಂದ್ರ ಚಾಹಲ್ ಬಗ್ಗೆ ಜಾತಿವಾದಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ನಂತರ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೆಲವು ಜನರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ನೋಯಿಸಿದ್ದರೆ ಅದಕ್ಕೆ ತಾವು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಏಪ್ರಿಲ್‌ನಲ್ಲಿ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಅವರೊಂದಿಗಿನ ವಿಡಿಯೋ ಸಂದರ್ಶನದಲ್ಲಿ ಯುವರಾಜ್, ಚಾಹಲ್ ಅವರ ಟಿಕ್ ಟಾಕ್ ವಿಡಿಯೋಗಳಿಗೆ ಸಂಬಂಧಿಸಿದಂತೆ ಮಾತನಾಡಿದ್ದರು. ಚಾಹಲ್ ಅವರ ಟಿಕ್ಟಾಕ್ ವಿಡಿಯೋವನ್ನು ಉಲ್ಲೇಖಿಸಿದ ಯುವಿ, ಟಿಕ್ಟಾಕ್ ಗೀಳು ಜಾಸ್ತಿ ಎಂದು ಹೇಳುವಾಗ ಜಾತಿ ಉಲ್ಲೇಖಿಸಿದ್ದರು. ಹೀಗಾಗಿ ಯುವಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ತಮ್ಮ ಅವಹೇಳನಕಾರಿ ಹೇಳಿಕೆಗೆ ಜಾಲತಾಣದಲ್ಲಿ ತೀವ್ರ ಆಕ್ರೋಶ ಎದುರಿಸಿದ ನಂತರ, ಯುವರಾಜ್ ಟ್ವಿಟರ್ ಮೂಲಕ ಕ್ಷಮೆಯಾಚಿಸಿದ್ದಾರೆ. 'ನಾನು ಯಾವುದೇ ರೀತಿಯ ಅಸಮಾನತೆಯನ್ನು ನಂಬುವುದಿಲ್ಲ. ಅದು ಜಾತಿ, ಬಣ್ಣ, ಮತ ಅಥವಾ ಲಿಂಗದ ಆಧಾರದ ಮೇಲೆ ಇರಲಿ. ಜನರ ಕಲ್ಯಾಣಕ್ಕಾಗಿ ನನ್ನ ಜೀವನ ನಡೆಸಿದ್ದೇನೆ, ಪ್ರತಿಯೊಬ್ಬ ವ್ಯಕ್ತಿಯನ್ನೂ ನಾನು ಗೌರವಿಸುತ್ತೇನೆ'.
'ನನ್ನ ಸ್ನೇಹಿತರೊಂದಿಗೆ ಸಂಭಾಷಣೆ ನಡೆಸುತ್ತಿರುವಾಗ, ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ಅದು ಅನಗತ್ಯ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೂ, ಒಬ್ಬ ಜವಾಬ್ದಾರಿಯುತ ಭಾರತೀಯನಾಗಿ ನಾನು ಯಾರೊಬ್ಬರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ನೋಯಿಸಿದ್ದರೆ, ಅದಕ್ಕಾಗಿ ವಿಷಾದ ವ್ಯಕ್ತಪಡಿಸಲು ಬಯಸುತ್ತೇನೆ. ಭಾರತ ಮತ್ತು ನನ್ನ ಎಲ್ಲ ಜನರ ಮೇಲಿನ ಪ್ರೀತಿ ಶಾಶ್ವತವಾಗಿದೆ' ಎಂದು ಯುವಿ ಹೇಳಿದ್ದಾರೆ.
ಯುವರಾಜ್ ಸಿಂಗ್ ದಲಿತರ ವಿರುದ್ಧ ಜಾತಿವಾದದ ಹೇಳಿಕೆ ನೀಡಿದ್ದಾರೆ ಎಂದು ಹರಿಯಾಣದ ಹನ್ಸಿ ಮೂಲದ ವಕೀಲ ರಜತ್ ಕಲ್ಸನ್ ಸ್ಥಳೀಯ ಪೊಲೀಸರಿಗೆ ದೂರು ಕೂಡ ನೀಡಿದ್ದರು.